ಹುಬ್ಬಳ್ಳಿ:
ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಸಂಸ್ಕಾರ ಮತ್ತು ಸಚ್ಚಾರಿತ್ರ್ಯದಿಂದ ಮಾತ್ರ ಬದುಕನ್ನು ಶ್ರೀಮಂತಗೊಳಿಸಲು ಸಾಧ್ಯವಿದೆ. ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ ಎಂದು ಬಾಳೆಹೊನ್ನೂರು ರಂಭಾಪುರಿಯ ಡಾ. ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.ಶನಿವಾರ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಜ. ರೇಣುಕಾಚಾರ್ಯ ರಥೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಹೃದಯ ಹೃದ್ಭೂಮಿ ಕೃಷಿಗೈದು ಶಿವಜ್ಞಾನದ ಅರಿವನ್ನು ಉಂಟು ಮಾಡುವ ಶಕ್ತಿ ಗುರುವಿಗಿದೆ ಹೊರತು ಬೇರಾರಿಗೂ ಇಲ್ಲ. ಜ. ರೇಣುಕಾಚಾರ್ಯರ ವಿಚಾರಧಾರೆ ಅಳವಡಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳುವುದು ಎಂದರು.ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿ, ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯವಾಗಿವೆ. ಸತ್ಯ ಶುದ್ಧ ಕಾಯಕದಿಂದ ಬದುಕು ಬಲಗೊಳ್ಳುತ್ತದೆ. ಜ. ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ಸಿದ್ಧಾಂತ ಜನ-ಮನದ ಮೇಲೆ ಪರಿಣಾಮ ಬೀರುತ್ತವೆ ಎಂದರು.
ಶಾಸಕ ಎನ್.ಎಚ್. ಕೋನರೆಡ್ಡಿ, ಬಿ.ಡಿ. ನಾಗನಗೌಡ, ಗುರುನಾಥಗೌಡ ಮಾದಾಪುರ, ರಘುನಾಥಗೌಡ, ಕೆಂಪಲಿಂಗನಗೌಡ ಸೇರಿದಂತೆ ಹಲವರಿದ್ದರು. ಹಳೇಹುಬ್ಬಳ್ಳಿ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ರೇಣುಕ ಪ್ರಸಾದ ನಿರೂಪಿಸಿದರು. ಬೆಳಗಿನ ವೇಳೆ ಜ. ರೇಣುಕಾಚಾರ್ಯರ ಮಂಗಲ ಮೂರ್ತಿಗೆ ವಿಶೇಷ ಪೂಜೆ ಜರುಗಿತು. ಸಂಜೆ 5ಕ್ಕೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಜ. ರೇಣುಕಾಚಾರ್ಯ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.