ಧರ್ಮ, ಹಣದ ಚುನಾವಣೆಯಲ್ಲಿ ಧರ್ಮಕ್ಕೇ ಜಯ: ಕೆ.ಎಸ್‌.ಈಶ್ವರಪ್ಪ

| Published : Mar 31 2024, 02:01 AM IST

ಸಾರಾಂಶ

ಚುನಾವಣೆಯಲ್ಲಿ ಧರ್ಮ ಎಂಬುದು ಮಾನವತೆಯ ಧರ್ಮ, ಮನುಷ್ಯ ಮನುಷ್ಯನಿಗೆ ಸ್ಪಂದಿಸುವ, ಸಮಾಜದ ಎಲ್ಲ ಸ್ತರಗಳ ಅಭಿವೃದ್ಧಿಯೇ ಧರ್ಮ. ಸ್ಪರ್ಧಿಸುವ ಘೋಷಣೆ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿದ್ದು, ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ. ರಾಜ್ಯಾದ್ಯಂತದಿಂದ ನಿರಂತರವಾಗಿ ಕರೆ ಬರುತ್ತಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಬಾರಿಯ ಚುನಾವಣೆ ಧರ್ಮ ಮತ್ತು ದುಡ್ಡಿನ ಚುನಾವಣೆ. ಈ ಚುನಾವಣೆಯಲ್ಲಿ ‘ಹಿಂದೂ ಹುಲಿ’ ಎಂದು ಜನರೇ ಕರೆಯುತ್ತಿರುವ ನಾನು ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿರುವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚುನಾವಣೆಯಲ್ಲಿ ಧರ್ಮ ಎಂಬುದು ಮಾನವತೆಯ ಧರ್ಮ, ಮನುಷ್ಯ ಮನುಷ್ಯನಿಗೆ ಸ್ಪಂದಿಸುವ, ಸಮಾಜದ ಎಲ್ಲ ಸ್ತರಗಳ ಅಭಿವೃದ್ಧಿಯೇ ಧರ್ಮ. ಸ್ಪರ್ಧಿಸುವ ಘೋಷಣೆ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿದ್ದು, ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ. ರಾಜ್ಯಾದ್ಯಂತದಿಂದ ನಿರಂತರವಾಗಿ ಕರೆ ಬರುತ್ತಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ ಎನ್ನುತ್ತಿದ್ದಾರೆ ಎಂದರು.

ಸಂಸದ ರಾಘವೇಂದ್ರ ನನಗೆ ಲಿಂಗಾಯತ ಸಮಾಜ ನನ್ನ ಹಿಂದಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ನನ್ನ ಜೊತೆ ಬಂದು ನೋಡಿದರೆ ಗೊತ್ತಾಗುತ್ತೆ, ಆ ಸಮಾಜದ ಎಷ್ಟು ಮಂದಿ ನನ್ನ ಜೊತೆಗಿದ್ದಾರೆ ಎಂದು. ಅದೇ ರೀತಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಈಡಿಗರು ನನ್ನ ಬೆಂಬಲಕ್ಕಿದ್ದಾರೆ ಎನ್ನುತ್ತಿದ್ದಾರೆ. ಆದರೆ ಎಲ್ಲ ಸಮಾಜದ ಹಿಂದೂಗಳೂ ನನಗೆ ಬೆಂಬಲ ನೀಡುತ್ತಿದ್ದಾರೆ. ಇಡೀ ಜಿಲ್ಲೆಯ ಜನ ಅಣ್ಣ, ತಮ್ಮನ ರೀತಿ ಬೆಂಬಲ ಕೊಡುತ್ತಿದ್ದಾರೆ. ನಿಮಗೆ ತುಂಬಾ ಅನ್ಯಾಯ ಆಗಿದೆ. ಆ ಅನ್ಯಾಯ ಸರಿಪಡಿಸಬೇಕು ಎಂದು ಜನ ಹೇಳುತ್ತಿದ್ದಾರೆ. ಅದೇ ರೀತಿ ಹಿಂದುತ್ವದ ಹುಲಿ ಕಳೆದುಕೊಳ್ಳಲು ತಯಾರಿಲ್ಲ. ಇದೆಲ್ಲದರ ಜೊತೆಗೆ ಯಾವುದೇ ಸಂದರ್ಭದಲ್ಲಿಯೇ ಬಂದರೂ ಸ್ಪಂದಿಸುತ್ತೀರಿ, ಕರೆ ಮಾಡಿದರೆ ಉತ್ತರಿಸುತ್ತೀರಿ. ಇಂತಹ ಸರಳ ನಾಯಕ ಬೇಕು. ಜನರನ್ನು ದೂರ ಇಡುವ ನಾಯಕ ಬೇಡ ಎಂದು ಜನ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಇಂದು ಬೈಂದೂರಿಗೆ ಭೇಟಿ:

ಮಾ.31ರಂದು ಬೈಂದೂರಿಗೆ ಭೇಟಿ ನೀಡಲಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂದರು. ಅದೇ ರೀತಿ ಏ.5ರಂದು ತೀರ್ಥಹಳ್ಳಿಯಲ್ಲಿ ಎರಡು ಸಭೆ ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಅಂಬುತೀರ್ಥದಲ್ಲಿ ಮತ್ತು ಮಧ್ಯಾಹ್ನ 2.30 ಕ್ಕೆ ತೀರ್ಥಹಳ್ಳಿ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದ ಬಳಿಕ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಚೆನ್ನಿ ಮಾತು ಬೇಸರ:

ನನ್ನ ವಿರುದ್ಧ ಶಾಸಕ ಚನ್ನಬಸಪ್ಪ ಏಕೆ ಮಾತನಾಡಿದರೋ ಗೊತ್ತಿಲ್ಲ. ನನ್ನ ಪ್ರಶ್ನಿಸುವಷ್ಟರ ಮಟ್ಟಿಗೆ ದೊಡ್ಡವರಾಗಿದ್ದಾರೆ ಎಂದು ತಿಳಿದುಕೊಂಡಿರಲಿಲ್ಲ. ನಾನು ಅವರಿಗೆ ಉತ್ತರ ನೀಡುವುದಿಲ್ಲ. ಆದರೆ ಒಂದು ನಿಜ. ನಾನು ಗೆದ್ದ ಬಳಿಕ ಮತ್ತೆ ಬಿಜೆಪಿಗೆ ಬರುತ್ತೇನೆ. ನಗರಪಾಲಿಕೆ ಟಿಕೆಟ್‌ ನೀಡುವ ತಂಡದ ಮುಖ್ಯಸ್ಥನಾಗಿಯೇ ಇರುತ್ತೇನೆ. ಇದು ನೂರಕ್ಕೆ ನೂರು ಸತ್ಯ ಎಂದರು.

ಮೋದಿ ಫೋಟೋ ಇಟ್ಟುಕೊಳ್ಳುವ ದುರ್ಬಲತೆ ಇದೆಯಾ ಎಂಬ ಕೆಲವರ ಮಾತಿಗೆ ಪ್ರತಿಕ್ರಿಯಿಸಿದ ಅವರು ನರೇಂದ್ರ ಮೋದಿ ನನ್ನ ಶಕ್ತಿ. ನನ್ನ ಹೃದಯದ ದೇವರು. ಶ್ರೀರಾಮನ ಫೋಟೋ ಇಟ್ಟುಕೊಳ್ಳುವುದು ಹೇಗೆ ಸರಿಯೋ ಹಾಗೆಯೇ ಮೋದಿ ಫೋಟೋ ಕೂಡ ಸರಿ. ಇಲ್ಲಿ ದುರ್ಬಲತೆಯ ಪ್ರಶ್ನೆ ಬರುವುದಿಲ್ಲ ಎಂದರು.

ಪಕ್ಷಕ್ಕೆ ದ್ರೋಹ ಬಗೆದು ಹೋದವರು ಯಡಿಯೂರಪ್ಪ. ಆಗ ಗೆದ್ದಿದ್ದು ಕೇವಲ ಆರು ಸೀಟು. ಅದು ಅವರ ಶಕ್ತಿ. ಬಳಿಕ ನಾನೇ ಮುಂದೆ ನಿಂತು ಪಕ್ಷಕ್ಕೆ ಕರೆ ತಂದೆ. ಹೈಕಮಾಂಡ್‌ ಮಾತು ಧಿಕ್ಕರಿಸಿ ಕಾಂಗ್ರೆಸ್‌ ಸೇರಿದ ಜಗದೀಶ್‌ ಶೆಟ್ಟರ್‌ ಅವರನ್ನು ಮರಳಿ ಪಕ್ಷಕ್ಕೆ ಕರೆ ತಂದು ಟಿಕೆಟ್‌ ನೀಡಲಾಗಿದೆ. ಹಾಗೆಯೇ ನಾನೂ ಮರಳಿ ಬರುತ್ತೇನೆ.

ಗೋಷ್ಠಿಯಲ್ಲಿ ಮಾಜಿ ನಗರಪಾಲಿಕೆ ಸದಸ್ಯ ಶಂಕರ್ ಗನ್ನಿ, ವಿಶ್ವಾಸ್, ಮಂಡೇನಕೊಪ್ಪ ಗಂಗಾಧರಪ್ಪ, ತೇಜು, ಬಾಲು, ಶ್ರೀಕಂಠ, ಜಾದವ್, ಚಿದಾನಂದ ಮತ್ತಿತರರು ಇದ್ದರು.

ಅಮಿತ್‌ ಶಾ, ಮೋದಿ ಕರೆ ಮಾಡಿಲ್ಲ

ತಮ್ಮ ಸ್ಪರ್ಧೆಯ ಹಿಂದೆ ಹೈಕಮಾಂಡ್‌ ಬೆಂಬಲ ಇದೆಯೆಂಬ ಸುದ್ದಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇರಬಹುದು ಎಂದು ಈಶ್ವರಪ್ಪ ಹೇಳಿದರು. ಇದುವರೆಗೆ ಅಮಿತ್‌ ಶಾ ಅಥವಾ ನರೇಂದ್ರ ಮೋದಿ ಕರೆ ಮಾತಾಡಿಲ್ಲ. ಬದಲಾಗಿ ಅಮಿತ್‌ ಶಾ ಅವರು ಈಶ್ವರಪ್ಪನವರಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹೇಳುವುದು ಬೇಡ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಮಾತಿನ ಅರ್ಥ ನಾನು ಸ್ಪರ್ಧೆಯ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಒಂದು ಕುಟುಂಬದ ಕೈಯಿಂದ ರಕ್ಷಿಸಬೇಕು ಎಂಬ ಇರಾದೆ ಅವರಿಗೂ ಇರಬಹುದೆಂಬ ಸಂಶಯ ನನಗೂ ಇದೆ ಎಂದು ಕೆ. ಎಸ್‌. ಈಶ್ವರಪ್ಪ ಹೇಳಿದರು.

ರಂಗನಾಥ ಸ್ವಾಮಿಯಿಂದ ಗೆಲುವಿನ ಆಶೀರ್ವಾದ

ಭದ್ರಾವತಿ ಸಮೀಪದ ದಾನವಾಡಿ ಎಂಬ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ನನಗೆ ಪ್ರಸಾದ ನೀಡಿ ಗೆಲುವಿನ ಆಶೀರ್ವಾದ ನೀಡಿದೆ ಎಂದು ಈಶ್ವರಪ್ಪ ಹೇಳಿದ್ದು, ಇದು ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ಅನುಭವ ನೀಡಿದೆ ಎಂದರು. ದಾನವಾಡಿ ಗ್ರಾಮದಿಂದ ಜನ ಬಂದು ದೇವಸ್ಥಾನಕ್ಕೆ ಬರುವಂತೆ ಕರೆದಿದ್ದರು. ಇಲ್ಲಿ ಪ್ರಸಾದ ಆಗುತ್ತದೆ ಎಂದಿದ್ದರು. ಸತ್ಯವಾಗುವುದಾದರೆ ತಕ್ಷಣ ಪ್ರಸಾದವಾಗುತ್ತದೆ. ಸ್ವಲ್ಪ ತಡವಾದರೆ ಪ್ರಯತ್ನ ಜಾಸ್ತಿ ಬೇಕಾಗುತ್ತದೆ ಎಂಬ ಮಾಹಿತಿ ನೀಡಿದ್ದರು. ಅದರಂತೆ ನಾನು ದೇವರ ಮುಂದೆ ಕಣ್ಣು ಮುಚ್ಚಿ ಪ್ರಾರ್ಥಿಸಿದೆ. ಎರಡು ನಿಮಿಷವಾದರೂ ಪ್ರಸಾದವಾಗಲಿಲ್ಲ. ನನ್ನ ಬೆಂಬಲಿಗರು ಪ್ರಸಾದ ನೀಡು ಎಂದು ಪ್ರಾರ್ಥಿಸ ತೊಡಗಿದರು. ನನಗೆ ಆಶ್ಚರ್ಯವಾಯಿತು. ಕೊನೆಗೆ ದೇವರ ಮುಂದೆ ಗಟ್ಟಿಯಾಗಿ ಹೇಳಿದೆ. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಪ್ರಸಾದ ನೀಡು ಎಂದು ಕೇಳಿಕೊಂಡೆ. ಕ್ಷಣ ಮಾತ್ರದಲ್ಲಿ ಪ್ರಸಾದವಾಯಿತು. ಬಹುಶಃ ದೇವರಿಗೂ ನಾನು ಸ್ಪರ್ಧಿಸುವುದು ಅನುಮಾನವಿತ್ತೇನೋ. ಗ್ಯಾರಂಟಿಯಾದಾಗ ಪ್ರಸಾದವಾಯಿತು ಎಂದು ಈಶ್ವರಪ್ಪ ಹೇಳಿಕೊಂಡರು.