ಧರ್ಮವನ್ನು ವಿನಾಶಕ್ಕಾಗಿ ಬಳಸಬಾರದು: ಶ್ರೀ ರಂಭಾಪುರಿ ಶ್ರೀಗಳು

| Published : Dec 18 2023, 02:00 AM IST

ಧರ್ಮವನ್ನು ವಿನಾಶಕ್ಕಾಗಿ ಬಳಸಬಾರದು: ಶ್ರೀ ರಂಭಾಪುರಿ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗದುಗಿನ ವೀರಸೋಮೇಶ್ವರ ನಗರದ ಪವಾಡ ಆಂಜನೇಯ ದೇವಸ್ಥಾನದ ಮಹಾದ್ವಾರ ಮತ್ತು ದೀಪಸ್ತಂಭ ಉದ್ಘಾಟನೆ ಹಾಗೂ ೫ನೇ ವರ್ಷದ ಕಾರ್ತೀಕೋತ್ಸವ ಸಮಾರಂಭದ ಈಚೆಗೆ ನಡೆಯಿತು. ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು.

ಗದಗ: ಧರ್ಮವನ್ನು ಸಮಾಜದ ಅಭ್ಯುದಯಕ್ಕಾಗಿ ಬಳಸಬೇಕಲ್ಲದೇ ವಿನಾಶಕ್ಕಾಗಿ ಅಲ್ಲ. ವಿದ್ಯೆ ಸಂಪತ್ತನ್ನು ಗಳಿಸುವಾಗ ಬಹಳ ದಿನ ಬದುಕಿರುತ್ತೇವೆಂಬ ವಿಶ್ವಾಸವಿರಬೇಕು. ಆದರೆ ಧರ್ಮದ ವಿಚಾರ ಬಂದಾಗ ಯಾವ ಘಳಿಗೆಯಲ್ಲಿ ಮೃತ್ಯು ಬಂದು ಎಳೆದೊಯ್ಯುವುದೋ ಎಂಬ ಭಯ ಹೊಂದಿ ಧರ್ಮ ಕಾರ್ಯಗಳನ್ನು ಬೇಗ ಬೇಗನೇ ಮುಗಿಸಬೇಕು ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಇಲ್ಲಿಯ ವೀರಸೋಮೇಶ್ವರ ನಗರದ ಪವಾಡ ಆಂಜನೇಯ ದೇವಸ್ಥಾನದ ಮಹಾದ್ವಾರ ಮತ್ತು ದೀಪಸ್ತಂಭ ಉದ್ಘಾಟನೆ ಹಾಗೂ ೫ನೇ ವರ್ಷದ ಕಾರ್ತೀಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ಕೇವಲ ಭೌತಿಕ ಸಂಪತ್ತಿಗಾಗಿ ಹಂಬಲಿಸುತ್ತಾನೆ ಹೊರತು ಆಧ್ಯಾತ್ಮಿಕ ಸಂಪತ್ತಿನ ಕಡೆಗೆ ಗಮನಿಸುವುದೇ ಇಲ್ಲ. ನಾವು ನಿಂತ ನೆಲ, ಕುಡಿಯುವ ನೀರು, ಉಸಿರಾಡುವ ಗಾಳಿ ಇವು ಎಲ್ಲ ಆ ಭಗವಂತ ಕೊಟ್ಟ ವರ. ಈ ಅಮೂಲ್ಯ ಸಂಪತ್ತನ್ನು ದೇವರು ಕರುಣಿಸದಿದ್ದರೆ ನಾವು ಬದುಕಿ ಬಾಳಲು ಸಾಧ್ಯವಿರುತ್ತಿರಲಿಲ್ಲ ಎಂದರು.

ಮನುಷ್ಯ ನಿಜವಾದ ಧರ್ಮಾಚರಣೆಯಿಂದ ವಿಮುಖಗೊಂಡರೆ ಆತಂಕ ತಪ್ಪಿದ್ದಲ್ಲ. ದೇವರನ್ನು ಯಾವ ಹೆಸರಿನಿಂದ ಕರೆದರೂ ಓಗೊಡುತ್ತಾನೆ ಆದರೆ ಇದನ್ನರಿಯದೇ ಇಂದು ದೇವರು ಧರ್ಮದ ಹೆಸರಿನಲ್ಲಿ ಸಂಘರ್ಷ ನಡೆಯುತ್ತಿರುವುದು ಒಳ್ಳೆಯದಲ್ಲ. ಬುದ್ಧಿ ಬೆಳೆದಷ್ಟು ಭಾವನೆ ಬೆಳೆಯುತ್ತಿಲ್ಲವಾದ ಕಾರಣ ಮನುಷ್ಯ ಸಂಘರ್ಷಕ್ಕೆ ಇಳಿಯುತ್ತಿದ್ದಾನೆ. ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಒಳ್ಳೆಯ ಗುರಿಯೊಂದಿಗೆ ಮುನ್ನಡೆದರೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯ ಎಂದು ತಿಳಿಸಿದರು.

ಪ್ರತಿಯೊಬ್ಬರ ಹೃದಯ ದೇಗುಲದಲ್ಲಿ ದೇವರು ವಾಸವಾಗಿದ್ದಾನೆ. ಆ ದೇವರ ಸಾಕ್ಷಾತ್ಕಾರ ಪಡೆಯಲು ಗುರುವಿನ ಮಾರ್ಗದರ್ಶನ ಮುಖ್ಯವಾಗಿದೆ. ಗುರು ಶಿಷ್ಯರ ಸಂಬಂಧದ ಪರಂಪರೆ ನಿರಂತರವಾಗಿದ್ದು ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿದು ಬೆಳೆದು ಬರುವಲ್ಲಿ ಮಹಿಳೆಯರ ಕೊಡುಗೆ ಮತ್ತು ಜವಾಬ್ದಾರಿ ಮಹತ್ತರವಾಗಿದೆ. ವೀರಶೈವ ಪಂಚ ಪೀಠಗಳು ಜಾತಿ ಮತ ಪಂಥಗಳ ಗಡಿ ಮೀರಿ ಸಮಾಜದಲ್ಲಿ ಸೌಹಾರ್ದತೆ ಮೂಡಿಸುವಲ್ಲಿ ನಿರಂತರ ಪ್ರಯತ್ನಿಸುತ್ತಿವೆ ಎಂದರು.

ಈ ವೇಳೆ ಬಂಕಾಪುರದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು, ಮಾಜಿ ಶಾಸಕ ಡಿ.ಆರ್.ಪಾಟೀಲ, ದೇವಸ್ಥಾನ ಕಮೀಟಿಯ ಅಧ್ಯಕ್ಷ ಶಿವಾನಂದಯ್ಯ ಹಿರೇಮಠ, ಮೃತ್ಯುಂಜಯ ಸಂಕೇಶ್ವರ ಸೇರಿ ಅನೇಕರು ಇದ್ದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳನ್ನು ವೈಭವದ ಸಾರೋಟ ಉತ್ಸವದ ಮೂಲಕ ಬರಮಾಡಿಕೊಳ್ಳಲಾಯಿತು.