ಸರ್ವರನ್ನು ಒಳಗೊಳ್ಳುವ ಧರ್ಮವೇ ಪರಮ ಶ್ರೇಷ್ಠ: ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ

| Published : Feb 26 2025, 01:03 AM IST

ಸರ್ವರನ್ನು ಒಳಗೊಳ್ಳುವ ಧರ್ಮವೇ ಪರಮ ಶ್ರೇಷ್ಠ: ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಉಪಜಾತಿಗಳ ನಡುವೆ ವೈವಾಹಿಕ ಸಂಬಂಧಗಳು ಬೆಳೆಯಬೇಕು. ಆ ಮೂಲಕ ಉಪಜಾತಿ ಎಂಬ ಕಂದಕ ಕಡಿಮೆಯಾಗಿ ಸಮಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ.

ಹಾವೇರಿ: ಭಾರತದಲ್ಲಿ ಹಲವಾರು ಧರ್ಮಗಳು ಹುಟ್ಟಿವೆ ಹಾಗೂ ನಶಿಸಿವೆ. ಆದರೆ ಸರ್ವರನ್ನೂ ಒಳಗೊಳ್ಳುವ, ವಿಶಾಲ ಮನೋಭಾವದ, ಸಮನ್ವಯ, ಸಾಮರಸ್ಯದ ಸರ್ವಮಾನ್ಯ ಧರ್ಮಗಳು ದಿನದಿಂದ ದಿನಕ್ಕೆ ಬೆಳೆಯುತ್ತವೆ. ಅಂತಹ ಉದಾರೀಕರಣದ ಧರ್ಮ ವೀರಶೈವ ಲಿಂಗಾಯತ ಧರ್ಮವಾಗಿದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಗರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಉಜ್ಜಯಿನಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಮತ್ತು ಭಾವೈಕ್ಯತಾ ಸಮಾರಂಭದ ಮೂರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಜಾತ್ಯತೀತ ಮನೋಭಾವ, ಲಿಂಗ ಸಮಾನತೆಗೆ ಒತ್ತು ಕೊಟ್ಟು ಮಾನವನನ್ನು ದೇವ ಮಾನವನನ್ನಾಗಿಸುವ, ನರನನ್ನು ಹರನನ್ನಾಗಿಸಿ ಧರ್ಮ ಪರಂಪರೆಗೆ ಹೊಸ ವಾಖ್ಯಾನ ನೀಡಿ, ಯಾವುದೇ ವ್ಯಕ್ತಿ ಲಿಂಗಧಾರಣೆ ಮೂಲಕ ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಳ ಆಚರಣೆ ಮಾಡುವವನು ವೀರಶೈವ ಲಿಂಗಾಯತ ಎನಿಸಿಕೊಳ್ಳುತ್ತಾನೆ ಎಂದರು.ಜಾತಿ ಉಪಜಾತಿ ಹೆಸರಿನಲ್ಲಿ ಸಮಾಜ ಒಡೆದುಹೋಗಿದೆ. ಎಲ್ಲರನ್ನು ಪ್ರೀತಿಸುವ ಹಾಗೂ ಒಳಗೊಳ್ಳುವ ಈ ಧರ್ಮದಲ್ಲಿ ಉಪಜಾತಿಗಳು ಬಹು ದೊಡ್ಡ ತೊಡಕಾಗಿವೆ. ಉಪಜಾತಿಗಳ ನಡುವೆ ವೈವಾಹಿಕ ಸಂಬಂಧಗಳು ಬೆಳೆಯಬೇಕು. ಆ ಮೂಲಕ ಉಪಜಾತಿ ಎಂಬ ಕಂದಕ ಕಡಿಮೆಯಾಗಿ ಸಮಸಮಾನತೆಯು ಸಾಧಿಸಲು ಸಾಧ್ಯವಾಗುತ್ತದೆ. ಜಗದ್ಗುರು ರೇಣುಕರ ಹಾಗೂ ಬಸವಾದಿ ಶರಣರ ಆಶಯವೂ ಇದೇ ಆಗಿತ್ತು ಎಂದು ಹೇಳಿದರು.ರಾಣಿಬೆನ್ನೂರಿನ ಶನೈಶ್ಚರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಂಪಿಯನ್ನು ಹೊರಗೆ ನೋಡು, ಉಜ್ಜಯನಿಯನ್ನಿ ಒಳಗೆ ನೋಡು ಎಂಬ ಮಾತಿದೆ. ಹಾಗೆ ಉಜ್ಜಯನಿ ಭಕ್ತಿ ಸಂಪತ್ತು ಹೆಚ್ಚಾಗಲು ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳ ಕತೃತ್ವ ಶಕ್ತಿಯೇ ಕಾರಣ ಎಂದರು.ಇದೇ ಸಂದರ್ಭದಲ್ಲಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ಸವಿನೆನಪಿಗಾಗಿ ಭಕ್ತರು ಶ್ರೀಗಳನ್ನು ನಾಣ್ಯಗಳಿಂದ ತುಲಾಭಾರ ಮಾಡಿದರು. ಬೆಳಗ್ಗೆ ಶ್ರೀಗಳಿಗೆ ಹರಿದ್ರಾಲೇಪನ ಹಾಗೂ ಮಂಗಲಸ್ನಾನ ಹಾಗೂ ಇಷ್ಟಲಿಂಗ ಪೂಜೆ ಮತ್ತು ಇತರೆ ಧಾರ್ಮಿಕ ವಿಧಿವಿಧಾನಗಳು ನಡೆದವು.ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ದಿಂಡನಹಳ್ಳಿಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹಿರೇಕುರವತ್ತಿಯ ಸಿದ್ದನಂದೀಶ್ವರ ಸ್ವಾಮೀಜಿ, ಗಂಜೀಗಟ್ಟಿಯ ಶಿವಲಿಂಗೇಶ್ವರ ಸ್ವಾಮೀಜಿ, ಮಹೇಶ ಹಾವೇರಿ, ತಮ್ಮಣ್ಣ ಮುದ್ದಿ, ಸಂತೋಷ ಹಿರೇಮಠ, ಮಲ್ಲಿಕಾರ್ಜುನಯ್ಯ ಹಿರೇಮಠ, ಶಿವಯೋಗಿ ಯರೇಶೀಮಿ, ಶಂಭುಲಿಂಗಪ್ಪ ಅಂಗಡಿ, ಉಮೇಶ ಹತ್ತಿಮತ್ತೂರ, ನಾಗರಾಜ ಕುಸನೂರ, ಶಂಭುಲಿಂಗಪ್ಪ ಕೌದಿ, ಕರಬಸನಗೌಡ ಪಾಟೀಲ, ಶಿವಯೋಗಿ ಹೂಲಿಕಂತಿಮಠ ಮತ್ತಿತರರು ಉಪಸ್ಥಿತರಿದ್ದರು.ಅಕ್ಕಮಹಾದೇವಿ ಭರತನೂರಮಠ ಪ್ರಾರ್ಥಿಸಿದರು. ನಿಖಿಲ್ ದೊಗ್ಗಳ್ಳಿ ಸ್ವಾಗತಿಸಿದರು. ಪುಷ್ಪಾ ಶಲವಡಿಮಠ ನಿರೂಪಿಸಿದರು. ವಿರೂಪಾಕ್ಷಪ್ಪ ಹತ್ತಿಮತ್ತೂರ ವಂದಿಸಿದರು.