ಮಾನವತೆಗೆ ವಿರುದ್ಧವಾದ ಮತಗಳಿಗೆ ಇಲ್ಲಿರಲು ಅಧಿಕಾರವಿಲ್ಲ: ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ

| Published : Nov 30 2024, 12:49 AM IST

ಮಾನವತೆಗೆ ವಿರುದ್ಧವಾದ ಮತಗಳಿಗೆ ಇಲ್ಲಿರಲು ಅಧಿಕಾರವಿಲ್ಲ: ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾಯಿತ ಸರಕಾರ ಮಾಡದೇ ಇರುವ ಕಾರ್ಯಗಳನ್ನು ಹೆಗ್ಗಡೆಯವರು ಮಾಡಿಕೊಂಡು ಬಂದಿದ್ದಾರೆ‌. ಇಲ್ಲಿನ ಗ್ರಾಮಭಿವೃದ್ಧಿ ಯೋಜನೆ ರಾಜ್ಯದ ಜನತೆಯನ್ನು ತಲುಪಿದೆ. ಅದು ದೇಶಾದ್ಯಂತ ಪಸರಿಸಬೇಕು. ಆರ್ಥಿಕ, ಮೌಲ್ಯಾಧಾರಿತ ಜೀವನ ನಡೆಸುವಂತಾಗಬೇಕು ಎಂದು ಸಚಿವ ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮಾನವ ಧರ್ಮದಿಂದ ದೂರಮಾಡುವ ಯಾವುದೇ ಮತಕ್ಕೂ ಎಲ್ಲಿಯೂ ಇರಲು ಅಧಿಕಾರ ಇಲ್ಲ ಎಂದು ಬೆಂಗಳೂರಿನ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಗಳು ಹೇಳಿದರು.

ಅವರು, ಧರ್ಮಸ್ಥಳದ ಲಕ್ಷದೀಪೋತ್ಸವದ ಸಂದರ್ಭ ಶುಕ್ರವಾರ ನಡೆದ 92ನೇ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಆಶೀರ್ವದಿಸಿದರು.

ಸೃಷ್ಟಿಯ ಸಕಲ ಚರಾಚರಗಳಲ್ಲಿ ಪರಮೇಶ್ವರ ಭಾವವಿದೆ. ಇದರ ಜ್ಞಾನ ಕೆಲವರಿಗಿದೆ, ಕೆಲವರಿಗಿಲ್ಲ. ಜ್ಞಾನದ ಕೊರತೆಯಿಂದಾಗಿ ಉತ್ತಮ ಬಾಳನ್ನು ಬಾಳುವಲ್ಲಿ ಸೋಲುತ್ತಿದ್ದೇವೆ. ನಾವು ನಮ್ಮನ್ನು ನಾವು ನಾಶಮಾಡಿಕೊಳ್ಳುಲು ಇರುವವರಲ್ಲ. ಅರಿಷಡ್ವರ್ಗಗಳಿಂದ ನಾವು ಬಿಡುಗಡೆ ಹೊಂದುವುದೇ ವಿವೇಕಪೂರ್ಣವಾದ ನಡವಳಿಕೆ ಎಂದರು. ಮಾನವತೆಗೆ ವಿರುದ್ಧವಾಗಿ ಹೋಗುವ ಮತಗಳಿಗೆ ಇಲ್ಲಿರಲು ಯಾವುದೇ ಅಧಿಕಾರವಿಲ್ಲ. ಕಾಲಕಾಲಕ್ಕೆ ನಾವು ಸುಧಾರಣೆಯಾದಲ್ಲಿ ಮಾತ್ರ ಕ್ಷೇಮದಿಂದಿರಲು ಸಾಧ್ಯ. ಕ್ಷೇಮವಾಗಿರಲು ಧರ್ಮದ ಅಗತ್ಯವಿದೆ ಎಂದ ಶ್ರೀಗಳು, ಹಿಂದೂ ಧರ್ಮದಲ್ಲಿನ ದಮ, ಅಸ್ತೇಯ, ಶೌಚ, ಇಂದ್ರೀಯ ನಿಗ್ರಹ, ಹ್ರೀಂ, ಶಿಕ್ಷಣ, ಸತ್ಯ, ಕೋಪ ಎಂಬ ದಶಗುಣಗಳನ್ನು‌ ವಿವರಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯದ ಗೃಹಸಚಿವ ಜಿ. ಪರಮೇಶ್ವರ ಮಾತನಾಡಿ, ಸ್ವಸ್ಥ ಸಮಾಜಕ್ಕೆ ಇಂಥ ಕಾರ್ಯಕ್ರಮಗಳು ಅವಶ್ಯ. ಸಂವಿಧಾನ ರಚನೆಯಾಗುವ ಮೊದಲೇ ಧರ್ಮಸ್ಥಳದಲ್ಲಿ 1933 ರಲ್ಲಿ ಸರ್ವಧರ್ಮ ಸಮಾನತೆಯ ಪರಿಕಲ್ಪನೆಯನ್ನು ಮಂಜಯ್ಯ ಹೆಗ್ಗಡೆಯವರು ತಂದಿದ್ದರು ಎನ್ನುವುದು ಅಧ್ಯಯನ ವಿಚಾರ. ಶಾಂತಿಯಿಂದ ಬಾಳುವ ಸನ್ನಿವೇಶ ನಿರ್ಮಾಣಮಾಡಬೇಕಾದ ಅವಶ್ಯಕತೆ ಇದೆ ಎಂದರು.ಚುನಾಯಿತ ಸರಕಾರ ಮಾಡದೇ ಇರುವ ಕಾರ್ಯಗಳನ್ನು ಹೆಗ್ಗಡೆಯವರು ಮಾಡಿಕೊಂಡು ಬಂದಿದ್ದಾರೆ‌. ಇಲ್ಲಿನ ಗ್ರಾಮಭಿವೃದ್ಧಿ ಯೋಜನೆ ರಾಜ್ಯದ ಜನತೆಯನ್ನು ತಲುಪಿದೆ. ಅದು ದೇಶಾದ್ಯಂತ ಪಸರಿಸಬೇಕು. ಆರ್ಥಿಕ, ಮೌಲ್ಯಾಧಾರಿತ ಜೀವನ ನಡೆಸುವಂತಾಗಬೇಕು ಎಂದರು.ಸ್ವಾಗತ ಭಾಷಣ ಮಾಡಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಧರ್ಮ ಅಥವಾ ಆಚರಣೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಾಗ ಅಥವಾ ಧರ್ಮದ ವ್ಯಾಖ್ಯಾನವನ್ನು ಸಂಕುಚಿತಗೊಳಿಸಿದಾಗ ಸಮಾಜದಲ್ಲಿ ಜಾತಿ, ಮತ, ಪಂಥ, ಪಂಗಡಗಳ ನಡುವೆ ಭಿನ್ನಾಭಿಪ್ರಾಯಗಳು, ತಿಕ್ಕಾಟ, ಘರ್ಷಣೆಗಳು ಉಂಟಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ. ಇಂಥ ಸಮ್ಮೇಳನಗಳ ಮೂಲ ಉದ್ದೇಶವೇ ಇದಾಗಿದೆ ಎಂದರು.

ಧರ್ಮವನ್ನು ಆರಾಧಿಸಿದರೆ ಸಾಲದು. ಅದನ್ನು ನಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತರಬೇಕು. ದೈನಂದಿನ ಬದುಕಿನಲ್ಲಿ ಪ್ರಾಮಾಣಿಕವಾಗಿ ಧರ್ಮದ ತತ್ವಗಳನ್ನು ಆಚರಣೆಗೆ ತರಬೇಕು. ಧರ್ಮವನ್ನು ಅಂಗಿಯಂತೆ ಧರಿಸಿ ಕಳಚಿಬಿಡುವುದಲ್ಲ. ಪೂಜೆ, ಪುನಸ್ಕಾರ, ತೀರ್ಥಕ್ಷೇತ್ರ ದರ್ಶನ, ಅನುಷ್ಠಾನ ಇವಿಷ್ಟಕ್ಕೆ ಮಾತ್ರ ಧರ್ಮವನ್ನು ಸೀಮೀತಗೊಳಿಸದೆ, ಧರ್ಮವು ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿರಬೇಕು ಎಂದ ಹೆಗ್ಗಡೆ, ನಡೆ, ನುಡಿ, ನೈತಿಕತೆಗಳು ಧರ್ಮದ ನೆಲೆಗಟ್ಟಿನಲ್ಲಿ ಇರಬೇಕು ಆಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಸಾಧ್ಯವಾಗುತ್ತದೆ. ಧೀಮಂತ ಸಮಾಜವೂ ನಿರ್ಮಾಣವಾಗುವ ಆಶಯವನ್ನು ಅವರು ವ್ಯಕ್ತಪಡಿಸಿದರು.

ಹಿಂದೂ ಧರ್ಮ ಹಾಗೂ ಸಮನ್ವಯದ ಕುರಿತಾಗಿ ಕನ್ನಡ ನಿವೃತ್ತ ಪ್ರಾಧ್ಯಾಪಕ, ಸಂವಹನಕಾರ ಡಾ. ಜಿ.ಬಿ. ಹರೀಶ ಅವರು, ಕ್ರೈಸ್ತ ಧರ್ಮದಲ್ಲಿ ಸಮನ್ವಯದ ದೃಷ್ಟಿ ಎಂಬ ವಿಚಾರವಾಗಿ ನಿವೃತ್ತ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಅವರು, ಇಸ್ಲಾಂ ಹಾಗೂ ಸಮಾನತೆಯ ಬಗ್ಗೆ ತತ್ವಪದಗಳ ಗಾಯಕ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ನೀಡಿದರು. ಮಂಜೂಷಾ ಮ್ಯೂಸಿಯಂಗೆ ಇಂಡಿಯಾ ಬುಕ್‌ ರೆಕಾರ್ಡ್‌, ಪ್ರಶಸ್ತಿ ಪತ್ರ ಅನಾವರಣ

ಇದೇ ವೇಳೆ ಕ್ಷೇತ್ರದ ಏಕವ್ಯಕ್ತಿ ಸಂಗ್ರಹಿತ ಮಂಜೂಷಾ ಮ್ಯೂಸಿಯಂಗೆ ಇಂಡಿಯಾ ಬುಕ್ ರೆಕಾರ್ಡ್ ನೀಡಿರುವ ಪ್ರಶಸ್ತಿ ಪತ್ರವನ್ನು ಸಚಿವರು ಅನಾವರಣಗೊಳಿಸಿದರು. ಸಂಸ್ಥೆಯ ಮುಖ್ಯ ತೀರ್ಪುಗಾರ ಡಾ. ಪ್ರದೀಪ್ ಭಾರಧ್ವಾಜ್ ಹೆಗ್ಗಡೆಯವರನ್ನು ಅಭಿನಂದಿಸಿದರು. ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ಮಾಹಿತಿ ನೀಡಿದರು. ಮ್ಯೂಸಿಯಂ ಕುರಿತಾದ ವಿಡಿಯೋವನ್ನು ಪ್ರದರ್ಶಿಸಲಾಯಿತು.ಉದ್ಘಾಟಕರ ಸಮ್ಮಾನ ಪತ್ರವನ್ನು ಶ್ರದ್ಧಾ ಅಮಿತ್, ಅಧ್ಯಕ್ಷರ ಸಮ್ಮಾನ ಪತ್ರವನ್ನು ಸುನಿಲ್ ಪಂಡಿತ್ ವಾಚಿಸಿದರು. ಸಚಿವರನ್ನು ಹಾಗೂ ಶ್ರೀಗಳನ್ನು ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಸನ್ಮಾನಿಸಿದರು. ಉಪನ್ಯಾಸಕರನ್ನು ಡಿ. ಸುರೇಂದ್ರ ಕುಮಾರ್ ಸನ್ಮಾನಿಸಿದರು‌.ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.------ಜನವರಿ 1ರಿಂದ ಉಜಿರೆ ಎಸ್‌ಡಿಎಂನಲ್ಲಿ ಡಯಾಲಿಸಿಸ್ ಉಚಿತ

2025ರ ಜನವರಿ 1ರಿಂದ ಉಜಿರೆಯ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಚಿಕಿತ್ಸೆಯನ್ನು ಅವಶ್ಯಕತೆಯುಳ್ಳವರಿಗೆ ಉಚಿತವಾಗಿ ನೀಡಲಾಗುವುದು. ಆಸ್ಪತ್ರೆಯಲ್ಲಿ 9 ಯಂತ್ರಗಳಿದ್ದು, ಚಿಕಿತ್ಸೆಗಾಗಿ ವಾರ್ಷಿಕವಾಗಿ ಸುಮಾರು 1.5 ಕೋಟಿ ರು. ವೆಚ್ಚವಾಗಲಿದೆ. ಸುಮಾರು 10,000 ರೋಗಿಗಳಿಗೆ ಇದು ಉಪಯೋಗವಾಗಲಿದೆ ಎಂದು ಹೆಗ್ಗಡೆಯವರು ಈ ಸಂದರ್ಭ ಮಹತ್ವದ ವಿಚಾರವನ್ನು ಪ್ರಕಟಿಸಿದರು.

ಹೇಮಾವತಿ ವೀ.ಹೆಗ್ಗಡೆ ಅವರು ರಚಿಸಿದ ಯಕ್ಷಗಾನ ಕಾವ್ಯವನ್ನು ಪ್ರಾರ್ಥನಾ ರೂಪದಲ್ಲಿ ಕಲ್ಯಾಣಿ ಅಭೇರಿ ರಾಗದಲ್ಲಿ ಶ್ರೀ ವಿದ್ಯಾ ಅವರು ಹಾಡಿದ್ದು ಹಾಗೂ ಅವರಿಗೆ ಶ್ರೇಯಸ್ ಪಾಳಂದ್ಯೆ ಅವರು ಮೃದಂಗದಲ್ಲಿ ಸಾಥ್ ನೀಡಿದ್ದು ಅಪಾರ ಮೆಚ್ಚುಗೆಗಳಿಸಿತು. ಸಭಾ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.