ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಧರ್ಮಸ್ಥಳದ ಧರ್ಮ ಕಾರ್ಯಗಳು ನಿರಂತರವಾಗಿ ನಡೆಯಲು ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.ಭಾರತೀ ವಿದ್ಯಾ ಸಂಸ್ಥೆ ಕುವೆಂಪು ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಲವು ಜನಪಯೋಗಿ ಕಾರ್ಯಕ್ರಮ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಉನ್ನತ ವ್ಯಾಸಂಗ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಅರ್ಹರು ಭಾರತೀ ವಿದ್ಯಾ ಸಂಸ್ಥೆಯಲ್ಲಿ ಗ್ರಂಥಾಲಯದ ಪ್ರಯೋಜನ ಪಡೆಯ ಬಹುದು ಜತೆಗೆ ಉತ್ತಮ ಲ್ಯಾಬ್‌ಗಳಿದ್ದು ಅವಶ್ಯಕತೆ ಇದ್ದರೆ ಅದನ್ನು ಬಳಿಸಿ ಕೊಳ್ಳಬಹುದು ಎಂದು ಸಲಹೆ ನೀಡಿದರು.ಯೋಜನೆ ಜಿಲ್ಲಾ ನಿರ್ದೇಶಕಿ ಎಂ. ಚೇತನಾ ಮಾತನಾಡಿ, ಶ್ರೀ ಕ್ಷೇತ್ರ ಸಂಸ್ಥೆಯಿಂದ ರಾಜ್ಯದಲ್ಲಿ ಈವರೆಗೆ ಒಟ್ಟು 1,25,010 ವಿದ್ಯಾರ್ಥಿಗಳಿಗೆ 153 ಕೋಟಿ ರು.ಮೊತ್ತ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭಾರತೀನಗರ ಯೋಜನಾ ಕಚೇರಿಗೆ ಈ ವರ್ಷ 221 ವಿದ್ಯಾರ್ಥಿಗಳಿಗೆ ಹೊಸದಾಗಿ ಶಿಷ್ಯ ವೇತನ ಮಂಜೂರಾಗಿದೆ ಮತ್ತು 260 ಹಳೆಯ ವಿದ್ಯಾರ್ಥಿಗಳಿಗೆ ರಿನೀವಲ್ ಮಾಡಲಾಗಿದೆ. ಶಿಕ್ಷಕರ ಕೊರತೆ ಎದುರಿಸುತ್ತಿರುವ ರಾಜ್ಯದ ಸರಕಾರಿ/ ಅನುದಾನಿತ ಶಾಲೆಗಳಿಗೆ ಜ್ಞಾನದೀಪ ಕಾರ್ಯಕ್ರಮದ ಮೂಲಕ 10340 ಗೌರವ ಶಿಕ್ಷಕ/ ಶಿಕ್ಷಕಿಯರನ್ನು ನಿಯೋಜನೆ ಮಾಡಲಾಗಿದೆ ಎಂದರು.ಇದೇ ವೇಳೆ ಯೋಜನೆಯಿಂದ ಮಂಜೂರಾದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಜನಜಾಗೃತಿ ಸದಸ್ಯ ಕ್ಯಾತಘಟ್ಟ ರವಿಕುಮಾರ್, ಜಿಲ್ಲಾ ಜನಜಾಗೃತಿ ಸದಸ್ಯೆ ಧರಣಿ ಪುಟ್ಟೇಗೌಡ, ಯೋಜನಾಧಿಕಾರಿ ಸುವರ್ಣ ಗಣಪತಿ ಭಟ್ ಮೇಲ್ವಿಚಾರಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂತಾನರಾಮನ್ ಗೆ ಸನ್ಮಾನಮೇಲುಕೋಟೆ:
ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಪಾಂಡವಪುರ ತಾಲೂಕಿನಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮೇಲುಕೋಟೆ ಶತಮಾನದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಸ್.ಎನ್.ಸಂತಾನರಾಮನ್‌ರನ್ನು ತಾಲೂಕು ಮಟ್ಟದ ಶಿಕ್ಷಕರದಿನಾಚರಣೆಯಲ್ಲಿ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಆತ್ಮೀಯವಾಗಿ ಸನ್ಮಾನಿಸಿದರು.ಇದೇ ವೇಳೆ ಸೇವೆಯಲ್ಲಿದ್ದಾಗಲೇ ಅಕಾಲಿಕ ಮರಣ ಹೊಂದಿದ ಚಿನಕುರಳಿ ಕೆಪಿಎಸ್ ಶಾಲೆ ಶಿಕ್ಷಕ ಚಿಕ್ಕಬಸಪ್ಪ ಇಲಾಖೆಗೆ ಸಲ್ಲಿಸಿದ ಸೇವೆ ಸ್ಮರಿಸಿ ಮೃತರ ಪತ್ನಿ ಗೌರವಾರ್ಪಣೆ ಮಾಡಲಾಯಿತು. ಜೊತೆಗೆ ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತದಾದ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಕರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಎಸಿ ಶ್ರೀನಿವಾಸ್, ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ, ಕ್ಷೇತ್ರಸಮನ್ವಯಾಧಿಕಾರಿ ಪ್ರಕಾಶ್ ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ಮೇಲುಕೋಟೆ ಸಿ.ಆರ್.ಪಿ ಬೆಟ್ಟಸ್ವಾಮಿಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.