ಧಾರ್ಮಿಕ ಆಚರಣೆ, ಹಬ್ಬಗಳು ನಮ್ಮ ಸಂಸ್ಕೃತಿ ಉಳಿವಿಗೆ ಸಹಕಾರಿ: ಮೂಜಗು

| Published : Jan 06 2025, 01:02 AM IST

ಧಾರ್ಮಿಕ ಆಚರಣೆ, ಹಬ್ಬಗಳು ನಮ್ಮ ಸಂಸ್ಕೃತಿ ಉಳಿವಿಗೆ ಸಹಕಾರಿ: ಮೂಜಗು
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ಸಾವಿರ ಮಠದ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬ-2025ಕ್ಕೆ ಮೂರು ಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಚಾಲನೆ ನೀಡಿದರು.

ಹುಬ್ಬಳ್ಳಿ: ಧಾರ್ಮಿಕ ಆಚರಣೆ ಮತ್ತು ಹಬ್ಬಗಳು ನಮ್ಮ ಸಂಸ್ಕೃತಿ, ಸಂಪ್ರದಾಯದ ಉಳಿವಿಗೆ ಸಹಕಾರಿಯಾಗಿವೆ. ಆಕಾಶ ಬುಟ್ಟಿ ಹಬ್ಬಕ್ಕೆ ಒಂದು ಪೌರಾಣಿಕ ಹಿನ್ನೆಲೆಯಿದ್ದು, ಪ್ರತಿಯೊಬ್ಬರು ಒಟ್ಟಾಗಿ ಇಂತಹ ಹಬ್ಬಗಳನ್ನು ಆಚರಣೆ ಮಾಡುವಂತಾಗಬೇಕು ಎಂದು ಮೂರು ಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.

ನಗರದ ಮೂರು ಸಾವಿರ ಮಠದ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬ-2025ಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವು ಮನೆ ಮತ್ತು ದೇವಸ್ಥಾನಗಳಲ್ಲಿ ದೀಪ ಹಚ್ಚುವ ಮೂಲಕ ಹೇಗೆ ಭಗವಂತನಿಗೆ ಪ್ರಾರ್ಥಿಸುತ್ತೇವೆಯೋ, ಅದೇ ರೀತಿ ಕಾರ್ತಿಕ ಮಾಸದಲ್ಲಿ ಆಕಾಶ ಬುಟ್ಟಿ ಹಾರಿಸುವ ಮೂಲಕ ಆಕಾಶದಲ್ಲಿರುವ ಭಗವಂತನಿಗೆ ಭಕ್ತಿ ಸಮರ್ಪಿಸುವುದೇ ಈ ಹಬ್ಬದ ವಿಶೇಷತೆಯಾಗಿದೆ. ಹುಬ್ಬಳ್ಳಿಯಲ್ಲಿ ಕಳೆದ 4 ವರ್ಷಗಳಿಂದ ಆಕಾಶ ಬುಟ್ಟಿ ಹಬ್ಬ ಆಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಇದೇ ರೀತಿ ಮತ್ತಷ್ಟು ಹಬ್ಬಗಳನ್ನು ಸೇರ್ಪಡೆ ಮಾಡಿಕೊಂಡು ಆಚರಿಸುವಂತಾಗಲಿ ಎಂದು ಸಲಹೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸನಾತನ ಹಿಂದೂ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಎಲ್ಲ ಹಿಂದೂಗಳು ಒಟ್ಟಾಗಿ ಹಬ್ಬಗಳ ಆಚರಣೆಯಲ್ಲಿ ಭಾಗವಹಿಸಬೇಕಿದೆ. ಅದಕ್ಕೆ ಪೂರಕವಾಗಿ ಅನೇಕ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಹಲಗಿ ಹಬ್ಬ, ಗಾಳಿಪಟ ಉತ್ಸವ, ಆಕಾಶ ಬುಟ್ಟಿ ಹಬ್ಬ ಸೇರಿದಂತೆ ಹಲವಾರು ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬರುವ ದಿನಗಳಲ್ಲಿ ಹಬ್ಬದ ಆಚರಣೆಗೆ ಹುಬ್ಬಳ್ಳಿ ಇಡೀ ದೇಶಕ್ಕೆ ಮಾದರಿಯಾಗಲಿ ಎಂದರು.

ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬದ ಅಧ್ಯಕ್ಷ ರಾಜು ಜರತಾರಘರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಅನಿತಾ ಜಡಿ ರಚಿತ ಕಲ್ಪನೆಯ ಕುಸುಮಗಳು ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ನಂತರ ನಡೆದ ಆಕಾಶ ಬುಟ್ಟಿ ಹಬ್ಬದ ಸ್ಪರ್ಧೆಯಲ್ಲಿ ಸ್ಪರ್ಧಾ ವಿಜೇತರಿಗೆ ವಿವಿಧ 50ಕ್ಕೂ ಹೆಚ್ಚು ಬಹುಮಾನ ವಿತರಿಸಲಾಯಿತು.

ಈ ವೇಳೆ ಮಾಜಿ ಶಾಸಕ ಅಶೋಕ ಕಾಟವೆ, ಸ್ವರ್ಣ ಗ್ರುಪ್ ಆಫ್ ಕಂಪನೀಸ್‌ನ ಎಂಡಿ ಡಾ. ವಿ.ಎಸ್‌.ವಿ. ಪ್ರಸಾದ್, ವಿಎಕೆ ಫೌಂಡೇಶನ್ ಸಂಸ್ಥಾಪಕ ವೆಂಕಟೇಶ ಕಾಟವೆ, ದುರ್ಗಾ ಡೆವಲಪರ್ಸ್‌ನ ಎಂಡಿ ವೀರೇಶ ಉಂಡಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿಕಾಯಿ, ಸುನೀತಾ ಬುರಬುರೆ, ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಮುಖಂಡರಾದ ಲಿಂಗರಾಜ ಪಾಟೀಲ, ಪ್ರಭು ನವಲಗುಂದಮಠ, ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಹಲವರಿದ್ದರು. ಬಾನಂಗಳದಲ್ಲಿ ಆಕಾಶಬುಟ್ಟಿಗಳ ಮೆರಗು

ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಆಕಾಶ ಬುಟ್ಟಿ ಹಬ್ಬದಲ್ಲಿ ನೂರಾರು ಬಗೆಬಗೆಯ, ಬಣ್ಣಬಣ್ಣದ ಆಕಾಶ ಬುಟ್ಟಿಗಳು ಬಾನಂಗಳದಲ್ಲಿ ಹಾರುವ ಮೂಲಕ ಹಬ್ಬಕ್ಕೆ ಮೆರಗು ತಂದವು. ಬಾನಂಗಳದಲ್ಲಿ ಹಾರಿಸಿದ ವಿವಿಧ ಬಣ್ಣ ಹಾಗೂ ಆಕರ್ಷಕ ಮಾದರಿಯ ಆಕಾಶ ಬುಟ್ಟಿಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು. ಮಹಿಳೆಯರು, ಪುರುಷರು, ಮಕ್ಕಳು, ಯುವಕ- ಯುವತಿಯರು ಸೇರಿದಂತೆ ಅನೇಕರು ಹಾರಿ ಬಿಟ್ಟ ಆಕಾಶ ಬುಟ್ಟಿಗಳು ಆಕಾಶದಲ್ಲಿ ತೇಲಾಡುತ್ತಾ ಒಂದು ವಿನೂತನ ಚಿತ್ತಾರವನ್ನೇ ಸೃಷ್ಠಿಸಿದವು.