ಹಿಮಾಲಯದಲ್ಲಿ ನಮ್ಮ ಅಧೀನದಲ್ಲಿ ೨೨ ಮಠಗಳಿವೆ. ಕೇದಾರದ ಅರ್ಥವೆಂದರೆ, ಕೆ ಅಂದರೆ ಸ್ವರ್ಗ, ದ್ವಾರ ಅಂದರೆ ಬಾಗಿಲು.

ಕಲ್ಮಠದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಡಾ. ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರ ಆಶೀರ್ವಚನ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಧಾರ್ಮಿಕ ಅನುಷ್ಠಾನವೆಂದರೆ ಕೇವಲ ಬಾಯಿ ಮಾತಲ್ಲ. ಭೂಮಿ ಆಕಾಶವೇ ಹೊದಿಕೆ ಮಾಡಿಕೊಂಡು ಧೃಢ ಮನಸ್ಥಿತಿಯಿಂದ ಅನುಷ್ಠಾನ ಮಾಡಿದರೆ ದೃಢ ಸಂಕಲ್ಪದ ಮನಕ್ಕೂ, ನೀರಿಗೂ ದಾರಿ ತಪ್ಪಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ ಎಂದು ಕೇದಾರ ಜಗದ್ಗುರು ಡಾ. ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಪಟ್ಟಣದ ಕಲ್ಮಠದ ಶಿವ ಸಾನಿಧ್ಯ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಎಸ್. ಅಲ್ಲಯ್ಯನವರಮಠ ನೇತೃತ್ವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿರು.

ಹಿಮಾಲಯದಲ್ಲಿ ನಮ್ಮ ಅಧೀನದಲ್ಲಿ ೨೨ ಮಠಗಳಿವೆ. ಕೇದಾರದ ಅರ್ಥವೆಂದರೆ, ಕೆ ಅಂದರೆ ಸ್ವರ್ಗ, ದ್ವಾರ ಅಂದರೆ ಬಾಗಿಲು. ನಿಮಗೆಲ್ಲರಿಗೂ ಸ್ವರ್ಗದ ಬಾಗಿಲು ದರ್ಶನವಾಗಿದೆ. ಅದಕ್ಕೆ ಕಾರಣ ಶಿವಲಿಂಗಯ್ಯ ಅಲ್ಲಯ್ಯನವರಮಠ ದೃಢ ಸಂಕಲ್ಪ. ಕೇದಾರನಾಥನನ್ನೇ ಇಲ್ಲಿಗೆ ಕರೆಸಿದ್ದಾರೆ. ಅವರು ಮಾಡಿದ ಸೇವೆಗೆ ಹಾಗೂ ಎಲ್ಲರಿಗೂ ಆಯುರಾರೋಗ್ಯ, ಸಂಪತ್ತು ದೇವರು ಕರುಣಿಸಲಿ ಎಂದರು.

ಕೇದಾರ ಪೀಠದ ಉತ್ತರಾಧಿಕಾರಿ ಕಣ್ವಕುಪ್ಪಿ ಶಾಂತಲಿಂಗ ಶಿವಾಚಾರ್ಯಸ್ವಾಮಿಜಿ ಮಾತನಾಡಿ, ದೇವರನ್ನು, ಗುರುಗಳನ್ನು ಸಮನಾಗಿ ನೋಡುವ ಪೀಠ ಕೇದಾರನಾಥ. ಪೂರ್ವ ಸುಕೃತ ಫಲವಾಗಿ ಶ್ರೀಗಳ ದರ್ಶನ ದೊರೆತಿದೆ. ಕೇದಾರನಾಥ ಜಗದ್ಗುರುಗಳು ಪ್ರಥಮ ಬಾರಿಗೆ ಯಲ್ಲಾಪುರಕ್ಕೆ ಆಗಮಿಸಿರುವುದು ನಿಮ್ಮೆಲ್ಲರ ಸುಕೃತಫಲವಾಗಿದೆ. ಕೇದಾರನಾಥನ ಪೂಜೆ ೬ ತಿಂಗಳು ವೀರಶೈವರು ನಡೆಸಿಕೊಂಡು ಬರುತ್ತಿದ್ದಾರೆ. ಕಾರ್ತಿಕದಿಂದ ೬ ತಿಂಗಳು ಮುಚ್ಚಿದ್ದು, ವೈಶಾಖಕ್ಕೆ ಬಾಗಿಲು ತೆರೆಯುತ್ತದೆ. ೬ ತಿಂಗಳು ಬಾಗಿಲು ಮುಚ್ಚಿದ್ದರೂ ಮಾಡಿದ ಪೂಜೆ ದೇವರಿಗೆ ಹಚ್ಚಿದ ವಿಭೂತಿ, ದೀಪ, ಅಲಂಕಾರ ಇದ್ದ ಹಾಗೆ ಇರುವುದು ವಿಶೇಷ ಪವಾಡವೇ ಆಗಿದೆ ಎಂದರು.

ಗುರುಪ್ರಸಾದ ಸಂಗಡಿಗರು ವೇದಘೋಷ ಪಠಿಸಿದರು. ಶಿವಲಿಂಗಯ್ಯ ಎಸ್. ಅಲ್ಲಯ್ಯನವರಮಠ ಕುಟುಂಬದವರು ಫಲ ಸಮರ್ಪಣೆ ಮಾಡಿದರು. ಇದಕ್ಕೂ ಮುನ್ನ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಉದ್ಯಮಿ ಬಾಲಕೃಷ್ಣ ನಾಯಕ ಸೇರಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡು ನಂತರ ಅನ್ನಪ್ರಸಾದ ಸ್ವೀಕರಿಸಿದರು.