ಸಾರಾಂಶ
ಸಿಇಟಿ ಪರೀಕ್ಷೆಯಲ್ಲಿ ವಿವಿಧೆಡೆ ವಿದ್ಯಾರ್ಥಿಗಳ ಜನಿವಾರಕ್ಕೆ ಕತ್ತರಿ ಹಾಕಿದ ಪ್ರಕರಣ ಖಂಡಿಸಿ, ಕೂಡಲೇ ಸರ್ಕಾರ ಅಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೊಸಪೇಟೆ ತಾಲೂಕು ಬ್ರಾಹ್ಮಣ ಸಂಘದ ನೇತೃತೃದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೊಸಪೇಟೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಬೀದರ್ ಮತ್ತು ಧಾರವಾಡದಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿರುವಾಗ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಅಪಮಾನ ಮಾಡಲಾಗಿದೆ. ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಾರ್ಯ ಆಗಿದ್ದು, ಕೂಡಲೇ ಸರ್ಕಾರ ಅಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೊಸಪೇಟೆ ತಾಲೂಕು ಬ್ರಾಹ್ಮಣ ಸಂಘದ ನೇತೃತೃದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬ್ರಾಹ್ಮಣ ಸಂಘದ ತಾಲೂಕು ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಕೆ. ದಿವಾಕರ ಮಾತನಾಡಿ, ಶಿವಮೊಗ್ಗದಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿರುವಾಗ ಜನಿವಾರವನ್ನು ಸಿಇಟಿ ಪರೀಕ್ಷಾಧಿಕಾರಿಗಳು ಕತ್ತರಿಸಿ ಹಾಕಿದ್ದಾರೆ. ಬೀದರ್‌ನಲ್ಲಿ ಪರೀಕ್ಷೆ ಬರೆಯಲು ಜನಿವಾರವನ್ನು ತೆಗೆಯುವಂತೆ ಆಗ್ರಹಿಸುವ ಮೂಲಕ ನಿರಾಕರಿಸಿದ್ದಕ್ಕಾಗಿ ಪರೀಕ್ಷೆ ಬರೆಯಲು ಅನುವು ನೀಡಲಾಗಿಲ್ಲ. ಇದು ಅಕ್ಷಮ್ಯ ಅಪರಾಧವಾಗಿದೆ. ಇದು ಬ್ರಾಹ್ಮಣ ಸಮುದಾಯಕ್ಕೆ ಹಾಗೂ ಹಿಂದೂಗಳಿಗೆ ಮಾಡಿದ ಅಪಮಾನವಾಗಿದೆ ಎಂದು ದೂರಿದರು.ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಈ ಘಟನೆ ಹಿನ್ನೆಲೆ ಪ್ರತಿಭಟನೆಗಳಿಗೆ ಮಣಿದು ಕಾಟಾಚಾರಕ್ಕೆ ಗೃಹ ರಕ್ಷಕರನ್ನೊ ಅಥವಾ ಕೇಂದ್ರದ ಮುಖ್ಯಸ್ಥರನ್ನು ಅಮಾನತು ಮಾಡಿ ಕೈತೊಳೆದುಕೊಳ್ಳದೆ, ಘಟನೆಗೆ ಕಾರಣರಾದವರು ಯಾರು ಎಂಬುದನ್ನು ಪತ್ತೆ ಹಚ್ಚಿ ಕ್ರಮಕ್ಕೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದರು.
ಪರೀಕ್ಷಾ ಕೇಂದ್ರದ ಫಟನೆಗೆ ಕಾರಣರಾದವರನ್ನು ಕೂಡಲೇ ಅಮಾತನುಗೊಳಿಸಿ, ಬೇಷರತ್ ಕ್ಷಮೆ ಯಾಚಿಸಬೇಕು. ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಶಿಸ್ತುಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.ಬ್ರಾಹ್ಮಣ ಸಂಘದಿಂದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ವೈದ್ಯ, ಪದಾಧಿಕಾರಿಗಳಾದ ರಮೇಶ್ ಆಚಾರ್ಯ, ಪ್ರಹ್ಲಾದ ಆಚಾರ್ಯ, ಮೋಹನ್ ಚಿಕ್ಕಭಟ್ ಜೋಶಿ, ವೀರಶೈವ ಸಮಾಜದ ಗೊಗ್ಗ ಚನ್ನಬಸವರಾಜ, ಸಾಲಿ ಸಿದ್ಧಯ್ಯಸ್ವಾಮಿ, ವಾಲ್ಮೀಕಿ ಸಮಾಜದ ಗುಜ್ಜಲ್ ಶ್ರೀನಾಥ, ಕಟಿಗಿ ಜಂಬಯ್ಯ ನಾಯಕ, ವೈಶ್ಯ ಸಮಾಜದ ಭೂಪಾಳ ರಾಘವೇಂದ್ರ ಶೆಟ್ಟಿ, ಭೂಪಾಳ ಪ್ರಹ್ಲಾದ್, ಮುಖಂಡರಾದ ವಿ. ಶಂಕರಾಚಾರಿ, ತಿರುಮಲಾಚಾರ್ಯ, ಚಂದ್ರಕಾಂತ ಕಾಮತ್, ಎ. ಸೀನಂಭಟ್, ರಮೇಶ್ ಪುರೋಹಿತ, ಡಾ. ಗುರುರಾಜ ಆಚಾರ, ಡಾ. ಸುಧೀಂದ್ರ, ನರಸಿಂಹಮೂರ್ತಿ ಆಚಾರ್ಯ ಸೇರಿದಂತೆ ನೂರಾರು ಜನರಿದ್ದರು.