ಸಾರಾಂಶ
ಕನ್ನಡ ಕಾರ್ತೀಕೋತ್ಸವ ಅಂಗವಾಗಿ ಕಸಾಪ ಘಟಕದಿಂದ ಕಾರಟಗಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದು ಬಂದ ಹಾದಿ ಎಂಬ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಕಲ್ಯಾಣ ಕರ್ನಾಟಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು.
ಕಾರಟಗಿ: ಹೈದರಾಬಾದ್ ನಿಜಾಮರಿಂದ ಸ್ವಾತಂತ್ರ್ಯ ಪಡೆಯುವ ಹೋರಾಟಕ್ಕೆ ರಕ್ತಸಿಕ್ತ ಇತಿಹಾಸವಿದೆ ಎಂದು ಸಾಹಿತಿ ಶಂಕದೇವರ ಹಿರೇಮಠ ಹೇಳಿದರು.
ಇಲ್ಲಿನ ಪ್ರತಿಷ್ಠಿತ ಸಿ. ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದಲ್ಲಿ ಕಸಾಪ ಘಟಕ ಕನ್ನಡ ಕಾರ್ತೀಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ‘ಕಲ್ಯಾಣ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದು ಬಂದ ಹಾದಿ'''' ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಗಣೇಶೋತ್ಸವ, ವಿಜಯದಶಮಿ, ಹಬ್ಬಗಳ ನೆಪದಲ್ಲಿ ಜನರನ್ನು ಸೇರಿಸಿ ರಜಾಕಾರರ ಕಪಿಮುಷ್ಟಿಯಿಂದ ವಿಮೋಚನೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಕ್ತ ಹರಿಸಿ ಹೋರಾಟ ನಡೆಸಿದನ್ನು ಇಂದಿನ ಯುವ ಪೀಳಿಗೆ ಮರೆಯಬಾರದು ಎಂದು ಹೇಳಿದರು.ಸತ್ಯಾಗ್ರಹ, ಅಹಿಂಸಾ ರೂಪದ ಚಳವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಪಡೆಯಲಾಯಿತು. ಆದರೆ ಹೈದರಾಬಾದ್ ಸಂಸ್ಥಾನದಿಂದ ವಿಮೋಚನೆಗಾಗಿ ನಡೆದ ಸ್ವಾತಂತ್ರ್ಯ ಹೋರಾಟ ಮಾತ್ರ ರಕ್ತಸಿಕ್ತವಾಗಿತ್ತು.ಅಖಂಡ ಭಾರತಕ್ಕೆ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಸಿಕ್ಕರೂ ಹೈದರಾಬಾದ್ ಸಂಸ್ಥಾನದ ಜನತೆಗೆ ಮಾತ್ರ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು. ಹೈದರಾಬಾದಿನ ನಿಜಾಮ ಮಾತ್ರ ತನ್ನ ಸಂಸ್ಥಾನವನ್ನು ಭಾರತದ ಒಕ್ಕೂಟದಲ್ಲಿ ಸೇರಿಸದೆ ಸ್ವತಂತ್ರವಾಗಿ ಉಳಿಯಲು ಬಯಸಿದ. ಇದರಿಂದ ಸಂಸ್ಥಾನದಲ್ಲಿನ ಬಹುಸಂಖ್ಯಾತ ಹಿಂದೂಗಳು ರೊಚ್ಚಿಗೆದ್ದರು. ಈ ನಿಜಾಮನ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಹೋರಾಟಕ್ಕೆ ನಾಂದಿ ಆಯಿತು.
ಈ ಸಂದರ್ಭದಲ್ಲಿ ನಿಜಾಮನ ಆಡಳಿತ ಈ ಭಾಗದ ಜನರ ಕೂಗು ಹತ್ತಿಕ್ಕಲು, ಹೋರಾಟ ಬಗ್ಗು ಬಡಿಯಲು, ತನ್ನ ಬಲಗೈ ಬಂಟ ಖಾಸಿಂ ರಜ್ವಿ ಎನ್ನುವವನ ನೇತೃತ್ವದಲ್ಲಿ ರಜಾಕಾರರ ಸೈನ್ಯ ಸಜ್ಜುಗೊಳಿಸಿದನು. ಇದ್ಯಾವುದಕ್ಕೂ ಜಗ್ಗದ ಜನತೆ ಹೋರಾಟಕ್ಕಿಳಿದರು ಎಂದು ಸ್ಮರಿಸಿದರು.ಸಾಕಷ್ಟು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಿ ರಜಾಕಾರರಿಂದ ಏಟು ತಿಂದರೂ, ಹೋರಾಟ ಮಾತ್ರ ಕೈಬಿಡಲಿಲ್ಲ. ಇದರಿಂದ ಬೇಸತ್ತು ರಜಾಕಾರರು ಕೊನೆ ಕೊನೆಯಲ್ಲಿ ಹೋರಾಟಕ್ಕಿಳಿದ ಜನರ ಮೇಲೆ ನಿರಂತರ ಅತ್ಯಾಚಾರ, ಕೊಲೆ, ದಬ್ಬಾಳಿಕೆಯಂತಹ ಕೃತ್ಯವೆಸಗಿ ಅಮಾನುಷವಾಗಿ ವರ್ತಿಸಿದರು. ಈ ವೇಳೆ ಬೀದರ್ ಜಿಲ್ಲೆ ಗೋರ್ಟಾ ಹತ್ಯಾಕಾಂಡ ಮಾತ್ರ ಎಂದೆಂದೂ ಮರೆಯಲಾಗದ್ದು. ಗೋರ್ಟಾದ ಮೇಲೆ ದಾಳಿ ಮಾಡಿ ರಜಾಕಾರರು ಅಲ್ಲಿನ ನೂರಾರು ಜನರನ್ನು ಹತ್ಯೆ ಮಾಡಿದರು. ಇದು ಈ ಭಾಗದ ಜಲಿಯನ್‌ವಾಲಾಬಾಗ್ ಘಟನೆಗೆ ಹೋಲಿಸಲಾಗುತ್ತದೆ. ಆದರೆ ಸಾವಿನ ಸಂಖ್ಯೆಯನ್ನು ಅಂದಿನ ನಿಜಾಮನ ಆಡಳಿತ ಮುಚ್ಚಿಟ್ಟಿತು ಎನ್ನುವ ಆರೋಪಗಳಿವೆ. ಕೊನೆಗೆ ಸರ್ದಾರ ವಲ್ಲಭಭಾಯಿ ಪಟೇಲರ ದಿಟ್ಟ ಕ್ರಮದಿಂದ ಈ ಭಾಗ ಭಾರತದ ಒಕ್ಕೂಟ ಸೇರಿತು ಎಂದು ಹೇಳಿದರು.ಕಸಾಪ ಮಾಜಿ ಅಧ್ಯಕ್ಷ ಬಸವರಾಜ ರ್‍ಯಾವಳದ್, ಖಜಾನೆ ಇಲಾಖೆ ಅಧಿಕಾರಿ ಹನುಮಂತಪ್ಪ ತೊಂಡಿಹಾಳ, ಕೆಪಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ವೇದಿಕೆ ಅಧ್ಯಕ್ಷ ಶ್ರೀನಿವಾಸ ಕಟ್ಟಿಮನಿ ಮಾತನಾಡಿದರು. ಕಾಲೇಜು ನಿರ್ದೇಶಕ, ಉದ್ಯಮಿ ಜಗದೀಶಪ್ಪ ಅವರಾಧಿ, ಉಪನ್ಯಾಸಕ ಆರ್. ಮೃತ್ಯುಂಜಯ, ರುದ್ರೇಶ್ ಬೆಟಗೇರಿ, ನಾಗರಾಜ್ ಹುಡೇದ್, ಡಾ. ಉಮೇಶ್ ಗುರಿಕಾರ್, ವಿರೂಪಾಕ್ಷೇಶ್ವರಸ್ವಾಮಿ, ಶಶಿಧರ ಪಟ್ಟಣಶೆಟ್ಟಿ ಇದ್ದರು. ಪ್ರಾಚಾರ್ಯ ನಾರಾಯಣ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಈಶ್ವರ ಹಲಗಿ, ಮಂಜುನಾಥ ಚಿಕೇನಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))