ಸಾರಾಂಶ
೩೭೧ ಜೆ ಕಲಂ ಜಾರಿಯಾಗಿದ್ದರಿಂದ ನಮ್ಮ ಭಾಗಕ್ಕೆ ಅತೀ ಹೆಚ್ಚಿನ ಅನುದಾನ ಸಿಗುತ್ತಿದೆ. ಈ ಭಾಗದಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಚಿತ್ತಾಪುರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶವೆಂದು ಕರೆಯುತ್ತಿದ್ದರು. ಈ ಭಾಗಕ್ಕೆ ೩೭೧(ಜೆ) ಜಾರಿಯಾದಗಾಗಿನಿಂದ ಈ ಹಣೆಪಟ್ಟಿ ಕಳಚಿ ಹೋಗಿ ನಮ್ಮ ಭಾಗದ ಹಲವರು ಉನ್ನತ ವ್ಯಾಸಂಗ ಮತ್ತು ನೌಕರಿಗಳಲ್ಲಿ ಸೌಲಭ್ಯ ಪಡೆದು ಉನ್ನತ ಹುದ್ದೆಗಳನ್ನು ಪಡೆಯುವಂತಾಗಿದೆ. ಇದಕ್ಕೆ ಕಾರಣೀಕರ್ತರಾದ ಮಹನೀಯರ ಶ್ರಮವನ್ನು ನಾವು ಎಂದಿಗೂ ಮರೆಯಬಾರದು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗಕ್ಕೆ ಅಭಿವೃದ್ಧಿ ಪರ ಚಿಂತನೆಯುಳ್ಳ ಸಚಿವರು ಇದ್ದು, ೩೭೧ ಜೆ ಕಲಂ ಜಾರಿಯಾಗಿದ್ದರಿಂದ ನಮ್ಮ ಭಾಗಕ್ಕೆ ಅತೀ ಹೆಚ್ಚಿನ ಅನುದಾನ ಸಿಗುತ್ತಿದೆ. ಈ ಭಾಗದಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಈ ಭಾಗದ ಸರ್ದಾರ ಶರಣಗೌಡ, ಶಿವಮೂರ್ತಿ ಅಳವಂಡಿ, ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಹಲವಾರು ಮುಖಂಡರ ಸತತ ಹೋರಾಟದ ಫಲ ಮತ್ತು ಆಗಿನ ಗೃಹ ಸಚಿವರಾಗಿದ್ದ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ದಿಟ್ಟ ನಿಲುವುಗಳಿಂದ ನಮ್ಮ ಭಾಗಕ್ಕೆ ಸ್ವಾತಂತ್ರ್ಯ ಸಿಗುವಂತಾಯಿತು ಎಂದು ಹೇಳಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಈಶ್ವರಾಜ ಇನಾಂದಾರ ಮಾತನಾಡಿದರು.
ವಿಶ್ವಕರ್ಮ ಸಮಾಜ ಅಧ್ಯಕ್ಷ ಪ್ರಹ್ಲಾದ ವಿಶ್ವಕರ್ಮ, ತಾಲೂಕು ಅಧಿಕಾರಿಗಳಾದ ಶಶಿಧರ ಬಿರಾದಾರ, ಸುನಿತಾ ಗೊಣಿ, ವಿಜಯಕುಮಾರ ಬಡಿಗೇರ, ಚಂದ್ರಾಮಪ್ಪ ಬಳಿಚಕ್ರ, ಮೊಹ್ಮದ ಅಕ್ರಂ ಪಾಶಾ, ಮಲ್ಲಿಕಾರ್ಜುನ ಸೇಡಂ ವೇದಿಕೆಯಲ್ಲಿದ್ದರು. ಸಂತೊಷಕುಮಾರ ಶಿರನಾಳ ನಿರೂಪಿಸಿ ವಂದಿಸಿದರು.