ಸಾರಾಂಶ
ಫೆ.8, 9ರಂದು ವಾಲ್ಮೀಕಿ ಜಾತ್ರೆ, ಸಂವಿಧಾನದ ಬಗ್ಗೆ ಶೋಷಿತರಲ್ಲಿ ಅರಿವು
ಕನ್ನಡಪ್ರಭ ವಾರ್ತೆ ದಾವಣಗೆರೆ/ ಹರಿಹರಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಸೆಳೆಯಲು ಬಿಜೆಪಿಯವರು ರಾಮನಾಮ ಸ್ಮರಣೆ ಮಾಡುತ್ತಿದ್ದರೆ, ಶ್ರೀವಾಲ್ಮೀಕಿ ಪೀಠವು ಶ್ರೀರಾಮ ಹಾಗೂ ವಾಲ್ಮೀಕಿ ಸ್ಮರಣೆಯನ್ನು ಶೋಷಿತರ ಜಾಗೃತಿಗಾಗಿ ಬಳಸುತ್ತಿದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ಹರಿಹರ ತಾಲೂಕು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ಫೆ.8 ಮತ್ತು 9ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶೋಷಿತ, ಬೇಡ ಸಮುದಾಯದ ವಾಲ್ಮೀಕಿ ಕ್ರಮೇಣ ಅಪಾರ ಪಾಂಡಿತ್ಯ ಬೆಳೆಸಿ, ಮಹಾನ್ ಗ್ರಂಥ ರಾಮಾಯಣ ರಚಿಸಿದರು. ಈ ಮಹಾಕೃತಿಯ ಮೂಲಕವೇ ಶ್ರೀರಾಮನ ನಾಮ ಜಗತ್ತಿಗೆ ಪರಿಚಯವಾಯಿತು ಎಂದರು.ಶ್ರೀಗುರುಪೀಠದಿಂದ ಪ್ರತಿ ವರ್ಷ ಫೆ.8 ಮತ್ತು 9ರಂದು ವಾಲ್ಮೀಕಿ ಜಾತ್ರೆ ಮೂಲಕ ಸಮಾಜ ಬಾಂಧವರಲ್ಲಿ ಇತಿಹಾಸ ಸ್ಮರಿಸುವ, ವೈಚಾರಿಕತೆ ಜಾಗೃತಿ ಮೂಡಿಸಲಾಗುತ್ತಿದೆ. ಅಂಬೇಡ್ಕರ್ ರಚಿತ ಸಂವಿಧಾನದ ಬಗ್ಗೆ ಶೋಷಿತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಾತ್ರೆಯು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವೂ ಅಲ್ಲ ಎಂದು ತಿಳಿಸಿದರು.
ಎರಡು ದಿನ ವಿವಿಧ ಕಾರ್ಯಕ್ರಮಗಳು:ಫೆ.8ರ ಬೆಳಿಗ್ಗೆ 7ಕ್ಕೆ ರಾಜನಹಳ್ಳಿಯಿಂದ ಶ್ರೀಗುರು ಪೀಠದವರೆಗೆ ಜಾನಪದ, ಸಾಂಸ್ಕೃತಿಕ ಕಲಾ ತಂಡದೊಂದಿಗೆ ಶ್ರೀ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ಸಾಗಲಿದೆ. 8 ಗಂಟೆಗೆ ವಾಲ್ಮೀಕಿ ಧ್ವಜಾರೋಹಣ, ಸರ್ವಧರ್ಮ ಸಾಮೂಹಿಕ ವಿವಾಹ, ನಂತರ ಮಹಿಳೆಯರು, ನೌಕರರು, ಯುವಕರ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ಹಾಸನದ ತಂಡದಿಂದ ಬೆಳಗಿನ ಜಾವದವರೆಗೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ. ಫೆ.9ರ ಬೆಳಿಗ್ಗೆ 9ಕ್ಕೆ ನಾಡಿನ ಶ್ರೀಗಳಿಂದ ವಾಲ್ಮೀಕಿ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ನಂತರ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಜನಜಾಗೃತಿಗಾಗಿ ಜಾತ್ರಾ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ಹೇಳಿದರು.
ಸಮುದಾಯದ ಮುಖಂಡ ಟಿ.ಈಶ್ವರ್ ಮಾತನಾಡಿ, ಅಯೋಧ್ಯೆಯಲ್ಲಿ ಕೇಂದ್ರ ಸರ್ಕಾರದಿಂದಲೇ ವಾಲ್ಮೀಕಿ ಮಂದಿರ ನಿರ್ಮಿಸುವುದು, ರಾಜ್ಯದಲ್ಲಿ ಬುಡಕಟ್ಟು ವಿಶ್ವ ವಿದ್ಯಾನಿಲಯ ಸ್ಥಾಪಿಸುವ ಕುರಿತು ವಾಲ್ಮೀಕಿ ಜಾತ್ರೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಬೇಕು. ಈ ಬಗ್ಗೆ ಜಾತ್ರೆ ಸಮಿತಿ, ಗುರುಗಳು, ಸಮಾಜದ ಮುಖಂಡರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ವಾಲ್ಮೀಕಿ ಜಾತ್ರೆ ಅಂಗವಾಗಿ ಸ್ವಾಮೀಜಿ ರಾಜ್ಯವ್ಯಾಪಿ ಪ್ರವಾಸ ಮಾಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವರು. ಹಿಂದಿನಂತೆಯೇ ಈ ಸಲವೂ ಜಾತ್ರೆಯನ್ನು ಯಶಸ್ವಿಯಾಗಿಸೋಣ. ಸಿನಿಮಾ ನಟರು ಆಗಮಿಸಿದ್ದ ವೇಳೆ ಹಿಂದೆ ಗದ್ದಲ ಏರ್ಪಟಿತ್ತು. ಅಂತಹ ಗದ್ದಲಕ್ಕೆ ಆಸ್ಪದ ಇಲ್ಲದಂತೆ ಈ ಬಾರಿ ಜಾತ್ರಾ ಸಮಿತಿ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ. 24 ಸಾವಿರ ಶ್ಲೋಕಗಳು, 8 ಖಂಡಗಳ ಮೂಲಕ ಜಗತ್ತಿಗೆ ಮಹಾನ್ ಗ್ರಂಥ ರಾಮಾಯಣ ನೀಡಿದ ಮಹರ್ಷಿ ವಾಲ್ಮೀಕಿಯನ್ನೇ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿಯವರು ಮರೆತಿದ್ದು ದುರಂತ. ರಾಮ ಮಂದಿರಕ್ಕೆ ಮುನ್ನ ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರವನ್ನೂ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಸಮಾಜದ ಮುಖಂಡರಾದ ಶಾಂತಲಾ ರಾಜಣ್ಣ, ಬಿ.ಶಿವಪ್ಪ, ದಾವಣಗೆರೆ ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಜಗಳೂರು ಕೆ.ಪಿ.ಪಾಲಯ್ಯ, ಹೊದಿಗೆರೆ ರಮೇಶ, ವೀರೇಂದ್ರ ಸಿಂಹ, ಟಿ.ಈಶ್ವರ, ಡಾ.ಜೆ.ರಂಗಯ್ಯ, ಜಂಬಣ್ಣ ನಾಯಕ್, ಹಿರಿಯ ವಕೀಲ ನೀಲಾನಹಳ್ಳಿ ಎನ್.ಎಂ.ಆಂಜನೇಯ ಗುರೂಜಿ ಇತರರಿದ್ದರು.ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಿಸಿ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಜೊತೆಗೆ ಜಗತ್ತಿಗೆ ರಾಮಾಯಣ ನೀಡಿದ ಮಹರ್ಷಿ ವಾಲ್ಮೀಕಿ ಮಂದಿರವನ್ನೂ ನಿರ್ಮಿಸಬೇಕು. ಜ.22ಕ್ಕೆ ರಾಮ ಮಂದಿರ ಉದ್ಘಾಟನೆಯಾಗುತ್ತಿರುವುದು ಸಂತೋಷದ ಸಂಗತಿ. ಆದರೆ, ಜಗತ್ತಿಗೆ ಶ್ರೀರಾಮನನ್ನು ಪರಿಚಯಿಸಿದ ವಾಲ್ಮೀಕಿಯ ಮರೆಯಬಾರದು. ರಾಮ ಮಂದಿರ ಸಮೀಪದಲ್ಲೇ ವಾಲ್ಮೀಕಿ ಮಂದಿರವೂ ಆಗಬೇಕು. ಈ ನಾಡಿನ ಶೋಷಿತರು ಸಂವಿಧಾನ ಬದ್ಧ ಹಕ್ಕು ಪಡೆಯಬೇಕು.ಕೆ.ಎನ್.ರಾಜಣ್ಣ, ಸಹಕಾರ ಸಚಿವ