ಸಾರಾಂಶ
ದಾನ, ಧರ್ಮಕ್ಕಿರುವ ಶಕ್ತಿ, ಸಾಮರ್ಥ್ಯ ಪರಮಾತ್ಮನ ನಾಮ ಸ್ಮರಣೆಗೂ ಇದೆ.
ಕನ್ನಡಪ್ರಭ ವಾರ್ತೆ ಕನಕಗಿರಿ
ದಾನ, ಧರ್ಮಕ್ಕಿರುವ ಶಕ್ತಿ, ಸಾಮರ್ಥ್ಯ ಪರಮಾತ್ಮನ ನಾಮ ಸ್ಮರಣೆಗೂ ಇದೆ ಎಂದು ಹರಿ ಭಕ್ತ ಪಂ. ಶಿವಶಂಕರ ಗುರೂಜಿ ಹೇಳಿದರು.ಅವರು ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಹಮ್ಮಿಕೊಂಡಿದ್ದ ಪಾಂಡುರಂಗ-ರುಕ್ಮಣಿ ಕೀರ್ತನೆಯಲ್ಲಿ ಗುರುವಾರ ಮಾತನಾಡಿದರು. ಪ್ರತಿಯೊಬ್ಬರಲ್ಲಿಯೂ ದೇವರಿದ್ದು, ಯಾರನ್ನೂ ಗುರಿಯಾಗಿಸುವುದು, ಇಯಾಳಿಸುವುದು ತರವಲ್ಲ. ಭಗವಂತನು ನೀಡಿದ ಜ್ಞಾನದಲ್ಲಿ ಆತ ಜೀವನ ನಡೆಸುತ್ತಿರುತ್ತಾನೆ. ಜ್ಞಾನ ಸಂಪಾದನೆಯ ಹಂಬಲ ಯಾರಲ್ಲಿ ಇರುತ್ತದೆಯೋ ಅವರು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬಾಳುತ್ತಾರೆ. ದೇವರ ನಾಮಾವಳಿಯಿಂದ ಮನುಷ್ಯನಲ್ಲಿ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಇದಕ್ಕೂ ಪೂರ್ವದಲ್ಲಿ ಬಳ್ಳಾರಿ ಜಿಲ್ಲೆಯ ಓಬಳಾಪುರಂ ಗ್ರಾಮದ ಪಾಂಡುರಂಗನ ಭಕ್ತರು ಪಟ್ಟಣದಲ್ಲಿ ನಾನಾ ಬೀದಿಗಳಲ್ಲಿ ಸಂಚರಿಸಿ ತಾಳಗಳ ನಾದದೊಂದಿಗೆ ಪಾಂಡುರಂಗ, ರುಕ್ಮಣಿ ದೇವರ ನೆನೆದು ಕುಣಿದು ಸಂಭ್ರಮಿಸಿದರು. ಕೀರ್ತನೆ ಸಂಪನ್ನವಾದ ಆನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ಈ ವೇಳೆ ದಿಂಡಿ ಮಾಲೀಕರಾದ ಓಬಳೇಶಪ್ಪ ಭದ್ರಾವತಿ, ಪ್ರಮುಖರಾದ ಸುರೇಶಪ್ಪ ಬೊಂದಾಡೆ, ಪುಂಡಲೀಕಪ್ಪ ಧಾಯಿಪುಲ್ಲೆ, ಶಶಿಧರ ಬೊಂದಾಡೆ, ರಮೇಶ ಅಚ್ಚಲಕರ, ಅಂಬೋಜಿರಾವ್ ಬೊಂದಾಡೆ, ಅನಂತಪ್ಪ ಧಾಯಿಪುಲ್ಲೆ ಹಾಗೂ ಭಾವಸಾರ ಕ್ಷತ್ರಿಯ ಸಮಾಜದವರು ಇದ್ದರು.