ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮನುಷ್ಯರಾಗಿ ಜನಿಸಿದ ನಾವು ಭಗವಂತನ ಕೃಪೆಗೆ ಪಾತ್ರರಾಗುವುದು ಅಷ್ಟು ಸುಲಭದ ಮಾತಲ್ಲ. ಅನುಕ್ಷಣ ಭಗವಂತನ ನಾಮಸ್ಮರಣೆ ಮಾಡುವುದರ ಜೊತೆಗೆ ಗುರುವಿನ ಸೇವೆ ಮಾಡಿದಾಗ ಮಾತ್ರ ಜೀವನದ ಜಂಜಾಟಗಳಿಂದ ಮುಕ್ತರಾಗಿ ಸದ್ಗತಿ ಹೊಂದಲು ಸಾಧ್ಯವೆಂದು ಉತ್ತರಕಾಶಿ ಸನ್ಯಾಸ ಆಶ್ರಮದ ಸುಖದೇವಾನಂದ ಗಿರಿ ಮಹಾರಾಜ ಹೇಳಿದರು.ಸೋಮವಾರ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿಗಳ 85ನೇ ವರ್ಧಂತಿ ಮಹೋತ್ಸವ, ಶ್ರೀಗಳ 55 ನೇ ಪೀಠಾರೋಹಣ, 55ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿ, ತೋರಿಕೆಯ ಭಕ್ತಿಗೆ ಭಗವಂತನ ಅನುಗ್ರಹ ದೊರೆಯುವುದಿಲ್ಲ. ನಿಷ್ಕಲ್ಮಶ ಭಕ್ತಿಗೆ ಮಾತ್ರ ದೊರೆಯಲು ಸಾಧ್ಯ. ನಮ್ಮಲ್ಲಿರುವ ಜ್ಞಾನದ ಹಸಿವನ್ನು ನೀಗಿಸಿ ಸನ್ಮಾರ್ಗದ ಹಾದಿಯಲ್ಲಿ ನಡೆಸುವ ಶಕ್ತಿ ಗುರುವಿನಲ್ಲಿ ಅಡಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಸತ್ಸಂಗಗಳಲ್ಲಿ, ಭಾಗಿಯಾಗಿ ಮಹಾತ್ಮರ ನುಡಿಮುತ್ತು ಆಲಿಸುವುದರ ಜೊತೆಗೆ ಗುರುವಿನ ಸೇವೆ ಮಾಡಿದಾಗ, ಸದ್ಗುರುವಿನ ಕೃಪೆ ಪಡೆಯಲು ಸಾಧ್ಯ ಎಂದು ಹೇಳಿದರು.
ಹರಿದ್ವಾರ-ಮುಂಬೈ ಮಹಾಮಂಡಲೇಶ್ಬರ ದಿವ್ಯಾನಂದ ಪುರಿ ಮಹಾರಾಜ, ಧಾರವಾಡದ ಮುರುಘರಾಜೇಂದ್ರ ಮಠದ ಜಗದ್ಗುರು ಮಲ್ಲಿಕಾರ್ಜುನ ಸ್ವಾಮೀಜಿ, ತಿರುಪತಿಯ ಲಿಲಾಪೀಠ ವಶಿಷ್ಠಾಶ್ರಮ ಶ್ರೀನಿವಾಸ ಮಂಗಾಪೂರ ಸ್ವರೂಪಾನಂದಗಿರಿ ಸ್ವಾಮೀಜಿ ನೇತೃತ್ವ ವಹಿಸಿ, ಕ್ಷಣಮಪಿ ಸಜ್ಜನ ಸಂಗತಿರೇಖಾ ಭವತಿ ಭವಾರ್ಣಾವ ತರಣೆ ನೌಕಾ ವಿಷಯ ಕುರಿತು ಮಾತನಾಡಿದರು. ಶ್ರೀಗಳ ವರ್ದಂತಿ ಮಹೋತ್ಸವದ ಸವಿನೆನಪಿಗಾಗಿ ಶ್ರೀಗಳ ಅಭಿನಂದನಾ ಗ್ರಂಥ ಸದ್ಗುರು ದರ್ಶನ ಸ್ಮರಣ ಸಂಚಿಕೆ ಲೋಕಾರ್ಪಣೆಯನ್ನು ಬೀದರ ಶಿವಕುಮಾರೇಶ್ವರ ಸ್ವಾಮೀಜಿ ನೆರವೇರಿಸಿದರು.ಬೀದರ ಚಿದಂಬರಾಶ್ರಮದ ಶಿವಕುಮಾರೇಶ್ಬರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ, ಹೈದ್ರಾಬಾದ್ ಲಲಿತಾಂಬಿಕ ಸುಪೀಠಂ ಸಂಪೂರ್ಣಾನಂದಗಿರಿ ಸ್ವಾಮೀಜಿ, ಹೊಸೂರ ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ನದಿಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ, ಸೊಲ್ಲಾಪುರ ಸಿದ್ಧಾರೂಢ ಮಠದ ಸುಶಾಂತಾದೇವಿ, ಕಾದರವಳ್ಳಿ ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು, ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ, ಬಸವರಾಜ ಕಲ್ಯಾಣಶೆಟ್ಟರ, ಸದಸ್ಯರಾದ ಶಾಮಾನಂದ ಪೂಜಾರ, ಉದಯಕುಮಾರ ನಾಯಕ, ವಿನಾಯಕ ಘೊಡಕೆ, ಕೃಷ್ಣಾ ಶುಗರ್ಸ್ ಅಧ್ಯಕ್ಷ ಪರಪ್ಪ ಸವದಿ, ಚಿದಾನಂದ ಸವದಿ, ಶಿವಾನಂದ ಸವದಿ, ಶಿವಾನಂದ ಬೆಳಗಾವಿ, ನಾಗಪ್ಪ ಮೇಟಿ ಸೇರಿದಂತೆ ಪೂಜ್ಯರು, ಗಣ್ಯರು, ಸಹಸ್ರಾರು ಸದ್ಭಕ್ತರು ಇದ್ದರು.ಸಾಧು ಸಂತರ ಸಂಘ ಮಾಡುವುದರಿಂದ ನಮ್ಮ ಜೀವನದಲ್ಲಿ ಸುಖ ಶಾಂತಿ ಸಿಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ ನೀಡಬೇಕು. ಅಂತಹ ಸಂಸ್ಕಾರವನ್ನು ಇಂಚಲದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ನೀಡುತ್ತಿದ್ದಾರೆ. ದುಷ್ಟರ ಸಂಘ ಮಾಡಬೇಡಿ, ನಾವು ಮಾಡಿದ ಸರಿ ತಪ್ಪುಗಳ ಪುಣ್ಯ, ಪಾಪ ನಾವು ಜೀವಿತ ಅವಧಿಯಲ್ಲೇ ತೀರಿಸಬೇಕು. ಯಜ್ಞ ಯಾಗಾದಿ ಮಾಡುವುದರಿಂದ ದುಷ್ಟ ಶಕ್ತಿ ನಾಶವಾಗುತ್ತದೆ.
-ದಿವ್ಯಾನಂದ ಪುರಿ ಮಹಾರಾಜ, ಮಹಾಮಂಡಲೇಶ್ವರ ಹರಿದ್ವಾರ-ಮುಂಬೈ