ಧಾರವಾಡ ತೇಜಸ್ವಿ ನಗರದ ಕೃಷ್ಣ ಅಂಬೇಕರ್ ಮತ್ತು ರಾಧಿಕಾ ಅಂಬೇಕರ್ ಮನೆಯಂಗಳದಲ್ಲಿ 13ನೇ ವರ್ಷದ ನೆನಪು ಸಂಗೀತ ಕಾರ್ಯಕ್ರಮ ಯುವ ಕಲಾವಿದರ ವೇದಿಕೆಗೆ ಸಾಕ್ಷಿಯಾಯಿತು.

ಧಾರವಾಡ:

ಇಲ್ಲಿಯ ತೇಜಸ್ವಿ ನಗರದ ಕೃಷ್ಣ ಅಂಬೇಕರ್ ಮತ್ತು ರಾಧಿಕಾ ಅಂಬೇಕರ್ ಮನೆಯಂಗಳದಲ್ಲಿ 13ನೇ ವರ್ಷದ ನೆನಪು ಸಂಗೀತ ಕಾರ್ಯಕ್ರಮ ಯುವ ಕಲಾವಿದರ ವೇದಿಕೆಗೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿಜಯಪುರದ ಉದಯೋನ್ಮುಖ ಗಾಯಕ ವಿಶಾಲ ಕಟ್ಟಿ ಅವರ ಗಾನಸುಧೆ ಹರಿದುಬಂತು. ರಾಗ ಯಮನ್‌ನಲ್ಲಿ ಮನಮೋಹಕ ಬಂದಿಶ್‌ಗಳ ಸುಂದರ ಪ್ರಸ್ತುತಿಯು ವಿಶಾಲ ಅವರ ಆತ್ಮವಿಶ್ವಾಸ ಹೆಚ್ಚಿಸಿತು. ನಂತರ ರಾಮನ ಭಕ್ತಿ ಗೀತೆ, ಮರಾಠಿ ಅಭಂಗ ಹಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಇವರಿಗೆ ತಬಲಾದಲ್ಲಿ ಅಕ್ಷಯ ಭಟ್, ಹಾರ್ಮೋನಿಯಂನಲ್ಲಿ ಬಸವರಾಜ್ ಹಿರೇಮಠ ಸಾಥ್‌ ನೀಡಿದರು. ಯುವ ತಬಲಾ ವಾದಕ ಕಿರಣ ಯಾವಗಲ್ ಅವರಿಂದ ಸ್ವತಂತ್ರ ತಬಲಾ ವಾದನ ಮೂಡಿಬಂತು. ತೀನತಾಲ್‌ದಲ್ಲಿ ಪೇಶ್ಕಾರ, ಕಾಯ್ದಾ, ರೇಲಾ ಸುಂದರವಾಗಿ ಪ್ರಸ್ತುತಪಡಿಸಿದರು.

ಬಸವರಾಜ್ ಹಿರೇಮಠ ಅವರು ಲೆಹರಾ ಸಾತ್ ನೀಡಿದರು. ಕಾರ್ಯಕ್ರಮದ ಕೇಂದ್ರ ಬಿಂದು ಮಹಾರಾಷ್ಟ್ರ ಗಡಹಿಂಗ್ಲಜದ ಗಾಯಕ ಅರ್ಣವ ಮಚ್ಛೀಂದ್ರ ಬುವಾ ಅವರು ರಾಗ ಪೂರಿಯಾ ಕಲ್ಯಾಣ ಪ್ರಸ್ತುತಿಯೊಂದಿಗೆ ಆರಂಭಿಸಿದರು. ವಿಲಂಬಿತ್ ಏಕತಾಲ್‌ದಲ್ಲಿ ''''ಆಜ ಸುಬನ...'''' ಮತ್ತು ಧೃತ್ ತೀನತಾಲ್ ದಲ್ಲಿ ''''ಬಹುತ ದಿನ ಬೀತೆ...'''' ಎಂಬ ಬಂದಿಶಗಳನ್ನು ಸಾದರಪಡಿಸಿ ಮೆರುಗು ತಂದರು. ನಂತರ ರಾಗ ಹಮೀರ್, ಅಭಂಗ್ ಮತ್ತು ದಾಸರ ಪದಗಳು ಸುಶ್ರಾವ್ಯವಾಗಿ ಮೂಡಿಬಂದವು. ಗುರುರಾಜ ಹೆಗೆರ ಆಡುಕಳ ಅವರು ಉತ್ತಮ ಸಾತ್ ನೀಡಿದರು. ಸಂವಾದಿನಿಯಲ್ಲಿ ಬಸವರಾಜ ಹಿರೇಮಠ ಅವರು ಉತ್ತಮ ಸಹಕಾರ ನೀಡಿದರು. ತಂಬೂರಿಯಲ್ಲಿ ಪುಟ್ಟರಾಜ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಪಂ. ಬಿ.ಎಸ್. ಮಠ, ವಿದೂಷಿ ಅಕ್ಕಮಹಾದೇವಿ ಮಠ, ಡಾ. ಶಾಂತಾರಾಮ ಹೆಗಡೆ, ಉ. ನಿಸಾರ್ ಅಹ್ಮದ್ ಖಾನ್, ಮಥುರಾ ದೀಕ್ಷಿತ್, ರೇಖಾ ಹೆಗಡೆ, ಡಾ. ದಿಲೀಪ ದೇಶಪಾಂಡೆ, ಮೇಜರ ಸುಮೇಧ ಅಂಬೇಕರ ಮೊದಲಾದವರು ಉಪಸ್ಥಿತರಿದ್ದರು. ಡಾ. ಹರೀಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವೀಣಾ ಶಾಂತೇಶ್ವರ, ಮಾಲತಿ ಪಟ್ಟಣಶೆಟ್ಟಿ, ಶಾಲಿನಿ ರಘುನಾಥ, ಹೇಮಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.