ಕನ್ನಡ ಧ್ವಜ ಕಂಬ ತೆರವು, ಹೆದ್ದಾರಿ ತಡೆದು ಪ್ರತಿಭಟನೆ

| Published : Nov 02 2023, 01:00 AM IST

ಕನ್ನಡ ಧ್ವಜ ಕಂಬ ತೆರವು, ಹೆದ್ದಾರಿ ತಡೆದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರದಲ್ಲಿ ರಾಜ್ಯೋತ್ಸವ ಆಚರಣೆಗೆ ಅಡ್ಡಿ, ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ
ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ಬರುವ ರಂಗಂಪೇಟೆಯ ದೊಡ್ಡ ಬಜಾರ್‌ನಲ್ಲಿ ಹಾಕಿದ ಕನ್ನಡ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಕರವೇ ಕಾರ್ಯಕರ್ತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜಾ ವೆಂಕಟಪ್ಪ ನಾಯಕ ವೃತ್ತದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಗರದ ರಂಗಂಪೇಟೆಯ ದೊಡ್ಡಬಜಾರಿನಲ್ಲಿ ಕಂಬವನ್ನು ಹಾಕಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದಕ್ಕೆ ಅಡ್ಡಿಪಡಿಸಿದ್ದಾರೆ. ಕನ್ನಡ ಧ್ವಜದ ಕಂಭವನ್ನು ಕಿತ್ತಿ ಹಾಕಿ ಕನ್ನಡಾಂಬೆಗೆ ಮತ್ತು ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಅವಮಾನ ಮಾಡಿದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ರಂಗಂಪೇಟೆಯ ದೊಡ್ಡ ಬಜಾರದಲ್ಲಿ ಸರ್ಕಾರಿ ಗಾಯರಾಣ ಜಮೀನು ಸರ್ವೇ ನಂ.73/1 ಮತ್ತು 73/1ರಲ್ಲಿ ದೊಡ್ಡ ಬಜಾರದಲ್ಲಿ ರಸ್ತೆಯ ಬದಿಯಲ್ಲಿ ಒಂದು ಕನ್ನಡ ಧ್ವಜದ ಕಂಬ ಹಾಕಿ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುವುದಕ್ಕೆ ಅಡ್ಡಿಪಡಿಸಿ ಧ್ವಜದ ಕಂಬ ತೆರವುಗೊಳಿಸಿದ್ದಾರೆ ಎಂದು ದೂರಿದರು. ತಹಸೀಲ್ದಾರರು, ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ಧ್ವಜದ ಕಂಬವನ್ನು ತೆರವುಗೊಳಿಸಿ ಕನ್ನಡಾಂಬೆಗೆ ಅವಮಾನ ಮಾಡಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ನಾವು ಯಾವುದೇ ಖಾಸಗಿ ಅಥವಾ ರಸ್ತೆಯ ಜಾಗದಲ್ಲಿ ಧ್ವಜದ ಕಂಭ ಹಾಕಿರುವುದಿಲ್ಲ ಮತ್ತು ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ತಹಸೀಲ್ದಾರರ ಮತ್ತು ನಗರಸಭೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆ ಸ್ಥಳದಲ್ಲಿ ಪುನಃ ಕನ್ನಡದ ಧ್ವಜ ಹಾಕಿ ಕಾರ್ಯಕ್ರಮ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ನ್ಯಾಯ ಸಿಗುವವರೆಗೂ ಎಲ್ಲಾ ಕನ್ನಡಪರ ಸಂಘಟನೆಗಳೊಂದಿಗೆ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಹೆದ್ದಾರಿ ತಡೆದು ಪ್ರತಿಭಟಿಸಿದ್ದರಿಂದ ಮೂರು ರಸ್ತೆಗಳಲ್ಲಿಯೂ ಕಿ.ಮೀ.ಗಳಷ್ಟು ಉದ್ದವಾಗಿ ವಾಹನಗಳು ನಿಂತಿದ್ದವು. ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಪರದಾಡಿದರು. ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ರವಿನಾಯಕ, ಸಚಿನ್ ನಾಯಕ, ಭೀಮು ನಾಯಕ ಮಲ್ಲಿಭಾವಿ, ಶ್ರೀನಿವಾಸ, ಹಣಮಂತ, ಅಯ್ಯಪ್ಪ ವಗ್ಗಾಲಿ, ನಾಗರಾಜ ನಾಯಕ, ಬಲಭೀಮನಾಯಕ, ಆನಂದ ಮಾಚಿಗೊಂಡಾಳ ಇತರರಿದ್ದರು.