ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್ ಗಳ ಅಳವಡಿಕೆ ಹಿನ್ನೆಲೆಯಲ್ಲಿ ಹಳೇ ಗೇಟ್‌ಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸೋಮವಾರ ಕಾರ್ಮಿಕರು 18ನೇ ಕ್ರಸ್ಟ್ ಗೇಟ್ ನ‌ ಒಂದು ಭಾಗ ತುಂಡರಿಸಿ ಹೊರ ತೆಗೆದರು.

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್ ಗಳ ಅಳವಡಿಕೆ ಹಿನ್ನೆಲೆಯಲ್ಲಿ ಹಳೇ ಗೇಟ್‌ಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸೋಮವಾರ ಕಾರ್ಮಿಕರು 18ನೇ ಕ್ರಸ್ಟ್ ಗೇಟ್ ನ‌ ಒಂದು ಭಾಗ ತುಂಡರಿಸಿ ಹೊರ ತೆಗೆದರು.

ಕಳೆದ ಮೂರು ದಿನಗಳ ಹಿಂದೆ 18ನೇ ಕ್ರಸ್ಟ್ ಗೇಟ್ ಕಟ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಹಳೇ ಕ್ರಸ್ಟ್ ಗೇಟ್ ನ ಒಂದು ಭಾಗ ಕತ್ತರಿಸಿ, ಕ್ರೇನ್ ಮೂಲಕ ಹೊರ ತೆಗೆಯಲಾಗಿದೆ. ಕ್ರಸ್ಟ್ ಗೇಟ್ ಅಳವಡಿಕೆಗಾಗಿ ಪೂಜೆ ಮಾಡಲಾಗಿದೆ. ಈಗ ಒಂದೊಂದಾಗಿ ಹಳೇ ಗೇಟ್‌ಗಳನ್ನು ತೆರವು ಮಾಡಲಾಗಿದೆ. 33 ಕ್ರಸ್ಟ್‌ ಗೇಟ್‌ಗಳ ಪೈಕಿ ಈಗ 15 ಹೊಸ ಕ್ರಸ್ಟ್‌ ಗೇಟ್‌ಗಳು ಅಳವಡಿಕೆಗೆ ಸಿದ್ಧಗೊಂಡಿವೆ. ಇನ್ನೂ 18 ಕ್ರಸ್ಟ್‌ ಗೇಟ್‌ಗಳನ್ನೂ ಗುಜರಾತ್‌ ಮೂಲದ ಕಂಪನಿ ನಿರ್ಮಾಣ ಮಾಡುತ್ತಿದೆ.

ತುಂಗಭದ್ರಾ ಜಲಾಶಯ ಕ್ರಸ್ಟ್‌ ಗೇಟ್‌ಗಳ ಎತ್ತರ 20 ಅಡಿ ಇದ್ದು, ಈಗ 18ನೇ ಕ್ರಸ್ಟ್‌ ಗೇಟ್‌ನ 10 ಅಡಿ ಭಾಗ ಕಟ್‌ ಮಾಡಿ ತೆರವುಗೊಳಿಸಲಾಗಿದೆ. ಜಲಾಶಯದಲ್ಲಿ 1621.21 ಅಡಿಯಷ್ಟು ನೀರಿದೆ. 1613 ಅಡಿಗೆ ನೀರು ಇಳಿದರೆ ಗೇಟ್‌ ಅಳವಡಿಕೆ ಕಾರ್ಯ ಆರಂಭಗೊಳ್ಳಲಿದೆ. ಈಗ ಜಲಾಶಯದಲ್ಲಿ 64.786 ಟಿಎಂಸಿ ನೀರು ಸಂಗ್ರಹ ಇದೆ. 43 ಟಿಎಂಸಿಗೆ ಇಳಿದರೆ ಜಲಾಶಯದಲ್ಲಿ ಹೊಸ ಗೇಟ್‌ಗಳ ಅಳವಡಿಕೆಗೆ ಅನುಕೂಲ ಆಗಲಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.