ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಎಚ್ಐವಿ ಸೋಂಕಿನಿಂದ ಹರಡುವ ಏಡ್ಸ್ ಕಾಯಿಲೆಯ ಬಗ್ಗೆ ಜನರಲ್ಲಿ ಇರುವ ಭಯವನ್ನು ದೂರ ಮಾಡುವುದರ ಜತೆಗೆ ಎಚ್ಐವಿ, ಏಡ್ಸ್‌ನಿಂದ ಉಂಟಾಗುವ ಕಳಂಕ ಮತ್ತು ತಾರತಮ್ಯ, ಹೊಸ ಪ್ರಕರಣ ಹಾಗೂ ಸಾವುಗಳನ್ನು ಸೊನ್ನೆಗೆ ತರಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ರಾಜೇಶ್ ಎನ್. ಹೊಸಮನೆ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಕಾಲೇಜು, ನಿತ್ಯಜೀವನ, ಸೌಖ್ಯಬೆಳಕು, ವಿಮುಕ್ತಿ, ಎಫ್‌ಪಿಎಐ, ವರ್ಲ್ಡ್ ವಿಸನ್ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಚ್ಐವಿ ಸೋಂಕಿತರನ್ನು ಮಾನವಿಯ ದೃಷ್ಟಿಯಿಂದ ನೋಡುವುದರ ಜತೆಗೆ ಧೈರ್ಯ ತುಂಬುವ ಕೆಲಸ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ದಿಶೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಾಗೃತಿ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡಲಾಗುವುದು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ. ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 6 ವರ್ಷಗಳಲ್ಲಿ 682567 ಜನರ ಪರೀಕ್ಷೆ ಮಾಡಲಾಗಿದೆ. ಬಹುಮುಖ್ಯವಾಗಿ ಎಚ್ಐವಿ ಸೋಂಕಿತ ಮಹಿಳೆ ಗರ್ಭಿಣಿಯಾದರೂ ಜನನವಾಗುವ ಮಗು ಎಚ್ಐವಿ ಸೋಂಕಿಲ್ಲದೇ ಜನಿಸಲು ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಇವೆಲ್ಲವುಗಳನ್ನು ನಿರ್ವಹಿಸಲು 2 ಎಆರ್‌ಟಿ ಕೇಂದ್ರಗಳು, 7 ಲಿಂಕ್ ಎಆರ್‌ಟಿ ಕೇಂದ್ರಗಳು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಏಡ್ಸ್ ನಿರ್ಮೂಲನಾಧಿಕಾರಿ ಹಾಗೂ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾನಸಿಕ ತಜ್ಞ ಡಾ. ರೋಹನ್ ಮಾನಸಿಕ ಕಾಯಿಲೆಗೆ ಆಪ್ತ ಸಮಾಲೋಚನೆಗಾಗಿ 14416 ಉಚಿತ ಸಹಾಯವಾಣಿಯ ಮಾಹಿತಿ ನೀಡಿದರು.ವಿಮ್ಸ್ ಐಟಿಸಿಟಿ ನೋಡಲ್ ಅಧಿಕಾರಿ ಡಾ. ಮರಿಗೌಡ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಆರ್. ಅನಿಲ್ ಕುಮಾರ್, ನಿತ್ಯ ಜೀವನ ಸಂಸ್ಥೆಯ ಹೇಮಲತಾ ಸಮಾರಂಭದಲ್ಲಿದ್ದರು.
ಎಆರ್‌ಟಿ ವೈದ್ಯಾಧಿಕಾರಿ ಡಾ. ದಿನೇಶ್‍ಗುಡಿ, ಎಫ್‌ಪಿಎಐ ವ್ಯವಸ್ಥಾಪಕಿ ವಿಜಯಲಕ್ಷ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಗಿರೀಶ್, ಸರಳಾದೇವಿ ಕಾಲೇಜಿನ ಎನ್‌ಎಸ್ಎಸ್ ಅಧಿಕಾರಿ ಲಕ್ಕಣ್ಣ, ಡಾ. ಪಲ್ಲವಿ, ರಮಾಭಾಯಿ, ಹೊನ್ನೂರಪ್ಪ, ಮಂಜುನಾಥ ಸೇರಿದಂತೆ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸನ್ಮಾನ:
ಎಚ್ಐವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳು, ವೈದ್ಯಾಧಿಕಾರಿಗಳು, ಆಪ್ತ ಸಮಾಲೋಚಕರು ಸೇರಿದಂತೆ 14 ಜನರಿಗೆ ಸನ್ಮಾನಿಸಲಾಯಿತು. ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಬೆಳಗ್ಗೆ ಜಾಗೃತಿ ಜಾಥಾ ಹಮ್ಮಿಕೊಂಡು ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.