ಸಾರಾಂಶ
- ಸಂತ್ರಸ್ತ ರೈತರಷ್ಟೇ ಅಲ್ಲ, ನಾಡಿನ ಸಮಸ್ತ ಜನತೆ, ಮಠಾಧೀಶರೂ ಹೋರಾಟಕ್ಕೆ ಇಳಿಯಲಿ: ಮಾಜಿ ಸಚಿವ ಮನವಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ರೈತರು, ಮಠಗಳಿಗೆ ರಾಜ್ಯ ಸರ್ಕಾರ ವಕ್ಫ್ ಮಂಡಳಿಯಿಂದ ಜಾರಿಗೊಳಿಸಿದ ನೋಟಿಸ್ ಮಾತ್ರವಲ್ಲದೇ, ಆರ್‌ಟಿಸಿ ಕಾಲಂ 11ರಲ್ಲಿ ನಮೂದಿಸಿದ ವಕ್ಫ್ ಹೆಸರನ್ನೂ ಸಂಪೂರ್ಣ ರದ್ದುಪಡಿಸಬೇಕು ಎಂದು ಮಾಜಿ ಸಚಿವ, ಎಂ.ಪಿ.ರೇಣುಕಾಚಾರ್ಯ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದರು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಕ್ಫ್ ಮಂಡಳಿಯಿಂದ ರೈತರು, ಮಠಗಳಿಗೆ ನೋಟಿಸ್ ನೀಡಿದ್ದು ಖಂಡನೀಯ. ವಕ್ಫ್ ಕಾಯ್ದೆಯೇ ಕರಾಳ ಮತ್ತು ಕಪ್ಪುಚುಕ್ಕೆಯಾಗಿದೆ. ವಕ್ಫ್ ಮಂಡಳಿ ಸದ್ದಿಲ್ಲದೇ ರೈತರ ಜಮೀನು, ಮಠಗಳು, ದೇವಸ್ಥಾನಗಳ ಆಸ್ತಿ ಕಬಳಿಸಲು ನೋಟಿಸ್ ಜಾರಿ ಮಾಡಿದೆ ಎಂದು ಆರೋಪಿಸಿದರು.
ಪಹಣಿಯ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂಬುದಾಗ ನಮೂದು ಮಾಡಿದ ನಂತರ ಎಲ್ಲಿಯೂ ಬದಲಾವಣೆ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ, ರಾಜ್ಯ ಸರ್ಕಾರವು ವಕ್ಫ್ ಮಂಡಳಿಯನ್ನೇ ರದ್ದುಪಡಿಸಬೇಕು. ಪ್ರಧಾನಿ ಮೋದಿ ಸಹ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ಅವರಿಗೆ ಪತ್ರ ಬರೆಯುವ ಮೂಲಕ ವಕ್ಫ್ ಮಂಡಳಿ ರದ್ದುಪಡಿಸುವಂತೆ ರೈತರು, ಮಠಗಳು, ನಾಡಿನ ಜನತೆ ಪತ್ರ ಬರೆದು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.ಜಮೀರ್ ಅಹಮದ್ ವಕ್ಫ್ ಮಂಡಳಿಗೆ ಹಿಂದುಗಳಿಗೆ ಸೇರಿದ ಜಮೀನು, ಮಠಗಳು, ದೇವಸ್ಥಾನ, ಪರಿಶಿಷ್ಟರು, ಹಿಂದುಳಿದವರ ಜಮೀನು ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಜವಾಹರ ಲಾಲ್ ನೆಹರು 1954ರಲ್ಲಿ ಪ್ರಧಾನಿ ಆಗಿದ್ದಾಗ ವಕ್ಫ್ ಮಂಡಳಿ ಜಾರಿಗೊಳಿಸಿದ್ದರು. ಪಿ.ವಿ. ನರಸಿಂಹ ರಾವ್ ಮಾರ್ಪಾಡು ಮಾಡಿ, 1992ರಲ್ಲಿ ಅನುಷ್ಠಾನಗೊಳಿಸಿದರು. ಡಾ.ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಅದಕ್ಕೆ ತಿದ್ದುಪಡಿ ತಂದರು. ಹೀಗೆ ಅಲ್ಪಸಂಖ್ಯಾತರ ಮತಗಳ ತುಷ್ಟೀಕರಣಕ್ಕಾಗಿ ನಿರ್ಮಾಣಗೊಂಡ ವಕ್ಫ್ ಮಂಡಳಿ ದೇಶ, ರಾಜ್ಯಕ್ಕೆ ಮಾರಕವಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ಕೊಟ್ಟ ಹಿನ್ನೆಲೆ, ಶಿಗ್ಗಾಂವಿ, ಚನ್ನಪಟ್ಟಣ ಸೇರಿದಂತೆ ಮೂರು ಉಪ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣಕ್ಕೆ ಹೆದರಿ, ಸಿದ್ದರಾಮಯ್ಯ ರೈತರಿಗೆ ನೀಡಿದ ನೋಟಿಸ್ ಹಿಂಪಡೆಯಲು ಸೂಚಿಸಿದ್ದಾರೆ. ನೋಟೀಸ್ ಹಿಂಪಡೆಯಲು ಸಿಎಂ ಮೌಖಿಕ ಆದೇಶ ನೀಡಿದ್ದಾರಷ್ಟೇ. ಈಗಾಗಲೇ ವಕ್ಫ್ ಮಂಡಳಿಗೆ ಬೆಲೆ ಬಾಳುವ ಭೂಮಿ ಸೇರ್ಪಡೆಯಾಗಿದ್ದರ ಬಗ್ಗೆ ಸಿದ್ದರಾಮಯ್ಯ ಮಾತನಾಡಿಲ್ಲ. ಇದನ್ನು ಬಿಜೆಪಿ ಒಪ್ಪುವುದೂ ಇಲ್ಲ. ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು.ಮಾಜಿ ಸಚಿವ ಡಾ. ಎ.ಎಚ್. ಶಿವಯೋಗಿಸ್ವಾಮಿ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ, ಅರವಿಂದ, ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಂ,ಸತೀಶ ಇತರರು ಇದ್ದರು.
- - -ಕೋಟ್‌ಮೈಸೂರಿನ ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ₹63 ಕೋಟಿ ಮೌಲ್ಯದ ನಿವೇಶನ ವಾಪಸ್ ಕೊಡುವುದಿಲ್ಲ ಎಂದಿದ್ದರು. ಆದರೆ, ತಮ್ಮ ಪತ್ನಿಯಿಂದಲೇ ನಿವೇಶನ ಹಿಂದಿರುಗಿಸಿದ್ದಾರೆ. ಇದು ಬಿಜೆಪಿ ಹೋರಾಟಕ್ಕೆ ಸಿಕ್ಕ ಯಶಸ್ಸು. ಬಿಜೆಪಿ ಹೋರಾಟ ನಡೆಸದಿದ್ದರೆ, ನರೇಂದ್ರ ಮೋದಿ ಪ್ರಧಾನಿ ಆಗಿರದೇ ಇದ್ದಿದ್ದರೆ ಸಂಸತ್ ಭವನ, ವಿಧಾನಸೌಧವನ್ನೂ ಸಿಎಂ ಸಿದ್ಧರಾಮಯ್ಯ ಸರ್ಕಾರ ವಕ್ಫ್ ಆಸ್ತಿ ಅಂತಾ ಫಲಕ ಹಾಕುತ್ತಿತ್ತು
- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ- - - -(ಫೋಟೋ ಬರಲಿವೆ).