ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕ ನಿರೀಕ್ಷಕ ಟಿ.ಭೀಮೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಟ್ಟಡ ಕಾರ್ಮಿಕರು ಇಲಾಖೆಯಿಂದ ಗುರುತಿನ ಚೀಟಿಗಳನ್ನು ಪಡೆದುಕೊಂಡು ನಿಗಧಿತ ಸಮಯದಲ್ಲಿ ನವೀಕರಣಮಾಡಿಸಿಕೊಂಡಾಗ ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇಲ್ಲವಾದಲ್ಲಿ ಸವಲತ್ತಿನಿಂದ ವಂಚಿತರಾಗುತ್ತೀರ ಎಂದು ಕಾರ್ಮಿಕ ನಿರೀಕ್ಷಕ ಟಿ.ಭೀಮೇಶ್ ಕಟ್ಟಡ ಕಾರ್ಮಿಕರಿಗೆ ತಿಳಿಸಿದರು.ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಹೊಳಲ್ಕೆರೆ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ಹಲವು ಸವಲತ್ತುಗಳನ್ನು ಕೊಡುವ ಕಲ್ಯಾಣ ಇಲಾಖೆಯಾಗಿ ಮಾರ್ಪಟ್ಟಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಶಕ್ತಿ ಬಂದಂತಾಗಿದೆ. ಕಾರ್ಮಿಕರ ಇಬ್ಬರು ಮಕ್ಕಳಿಗೆ ಪ್ರತಿ ವರ್ಷವೂ ಒಂದನೆ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ, ಮದುವೆಗೆ ಸಹಾಯ ಧನ, ಸ್ವಾಭಾವಿಕ ಮರಣ ಹೊಂದಿದರೆ ಪರಿಹಾರ, ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟರೆ 8 ಲಕ್ಷ ರು. ನೀಡಲಾಗುವುದು. ವೈದ್ಯಕೀಯ ಸಹಾಯಧನ, 60 ವರ್ಷ ತುಂಬಿದವರಿಗೆ ಪಿಂಚಣಿ, ಹೆರಿಗೆ ಭತ್ಯೆ,ತಾಯಿ ಮಗು ಸಹಾಯ ಹಸ್ತ ಆರೈಕೆಗೆ ಹಣ ಸಿಗುತ್ತದೆ ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ, ಕಲ್ಯಾಣ ಮಂಡಳಿ ಸ್ಥಾಪನೆಯಾಗಿ 18 ವರ್ಷಗಳಾಗಿದ್ದರೂ ಸರ್ಕಾರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಕಾರ್ಮಿಕ ಸಚಿವರಿಗೆ ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲದಂತಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 10 ಸಾವಿರ ಕೋಟಿ ರು. ಇದೆ. ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುತ್ತಿಲ್ಲ. ಭ್ರಷ್ಟಾಚಾರ ತಡೆಯಲು ಹೋರಾಟ ಮಾಡಬೇಕಿದೆ. ಮುಂದಿನ ವರ್ಷದಿಂದ ಮೇ 1ನ್ನು ಹಬ್ಬದ ದಿನವನ್ನಾಗಿ ಆಚರಿಸಬೇಕಿದೆ. ಕಾರ್ಮಿಕರಲ್ಲಿ ತಿಳುವಳಿಕೆ ಮೂಡಿದಾಗ ಮಾತ್ರ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಕೆ.ಗೌಸ್‍ಪೀರ್, ನಾದಿ ಅಲಿ, ಎಂ.ಆರ್.ನರಸಿಂಹಸ್ವಾಮಿ, ರಾಜ್ಯ ಖಜಾಂಚಿ ಡಿ.ಈಶ್ವರಪ್ಪ, ಚಾಂದ್‍ಪೀರ್, ಇಮಾಮ್ ಮೊಹಿದ್ದೀನ್, ಮುಜಿಬುಲ್ಲಾ, ವೈ.ಬಸವರಾಜ್, ಮಹಂತೇಶ್, ಸಲೀಂ, ರಾಜಣ್ಣ, ಮಾಯಣ್ಣ, ರಾಜಪ್ಪ ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.