ಸಾರಾಂಶ
ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆತುಳುನಾಡಿನ 77 ಗ್ರಾಮಗಳ ಕೂಡುವಿಕೆಯ 18 ಮಾಗಣೆಯ ದೇವಾಲಯ ಎನ್ನುವ ಹಿರಿಮೆಯೊಂದಿಗೆ 2.75 ಎಕರೆ ವ್ಯಾಪ್ತಿಯಲ್ಲಿ ಕಲಾತ್ಮಕವವಾಗಿ ಅರಳಿರುವ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಸಂಪೂರ್ಣ ನವೀಕರಣಗೊಂಡಿದೆ. ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಫೆ. 28ರಿಂದ ಮಾ. 7ರ ವರೆಗೆ ಜರುಗಲಿದೆ.
ತುಳುನಾಡಿನ ಚೌಟರಸರ ಅರಮನೆಯ ಕುಲದೇವರಾಗಿ ಆರಾಧ್ಯ ಶ್ರೀ ಸೋಮನಾಥೇಶ್ವರನ ಸನ್ನಿಧಿಗೆ 800 ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ದ.ಕ. ಜಿಲ್ಲೆಯಲ್ಲೇ ಅತಿ ಹಿರಿದಾದ ಪುತ್ತಿಗೆ (ಪುತ್ತೆ)ಯ ಈ ಈ ದೇಗುವ ಮೂರು ಪ್ರಾಂಗಣಗಳು, ಶಿಲೆ, ಕಾಷ್ಠಶಿಲ್ಪ, ಲೋಹಗಳು ಹೀಗೆ ನಯನ ಮನಹೋಹರವಾಗಿ ಅರಳಿ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.ನಾಗು ನದಿಯ ತಟದಲ್ಲಿ ಮೂರು ಸುತ್ತಿನ ಪ್ರಾಂಗಣ, ಪಶ್ಚಿಮಾಭಿಮುಖೀ ಶ್ರೀ ಸೋಮನಾಥೇಶ್ವರ ದೇವರ ಲಿಂಗ, ಬಲಭಾಗದಲ್ಲಿ ಷಡ್ಡುಜ ಶ್ರೀ ಮಹಿಷಮರ್ಧಿನಿ ಅಮ್ಮನವರ ವಿಗ್ರಹ, ಎಡಭಾಗದಲ್ಲಿ ಶ್ರೀ ಮಹಾಗಣಪತಿ ದೇವರ ವಿಗ್ರಹ, ಶ್ರೀ ಲಕ್ಷ್ಮೀನರಸಿಂಹ ಮತ್ತು ಶ್ರೀ ಚಂದ್ರನಾಥೇಶ್ವರ ದೇವರ ಸಂಕಲ್ಪವಿದೆ. ಪಂಚಧೂಮಾವತಿ , ಕರಿಯಮಾಲ , ರಕೇಶ್ವರಿ ದೈವ , ನಾಗದೇವರ ಸಾನ್ನಿಧ್ಯವಿದೆ.
ಸಮಗ್ರ ಜೀರ್ಣೋದ್ದಾರ: ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ (ಪ್ರಧಾನ ಗೌರವಾಧ್ಯಕ್ಷರು), ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ (ಗೌರವಾಧ್ಯಕ್ಷರು) ಸಹಿತ ಗಣ್ಯರಿರುವ ಜೀರ್ಣೋದ್ದಾರ, ಬಹ್ಮಕಲಶ ಸಮಿತಿಗಳು ಸಕ್ರಿಯ ಆನುವಂಶಿಕ ಆಡಳಿತ ಮೊಕ್ತಸರ, ಚೌಟರ ಅರಮನೆ ಕುಲದೀಪ ಎಂ. ಹಿರಿತನದಲ್ಲಿ ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರ ವಾಸ್ತು ಪ್ರಕಾರ ದೇಗುಲ ನಿರ್ಮಾಣವಾಗಿದೆ.ಆಯ ಬದಲಾಗಿದೆ. ನಿದೇ ಮೊದಲಾಗಿ ನಿಧಿಕುಂಭ ಸ್ಥಾಪನೆ, ಷಡಾಧಾರ ಪ್ರತಿಷ್ಠೆ ನಡೆದಿದೆ. ಸೋಮನಾಥೇಶ್ವರ ದೇವರ ಶಿಲಾಮಯ ಗರ್ಭಗುಡಿ, ಸಮಾನ ಸ್ತರದಲ್ಲಿ ಪ್ರತ್ಯೇಕವಾಗಿ ಮಹಿಷಮರ್ಧಿನಿ ಅಮ್ಮನವರ ಗುಡಿ ನಿರ್ಮಿಸಲಾಗಿದೆ.
ತಾಮ್ರ ಹೊದೆಸಿದ ಒಂದನೇ ಪೌಳಿ, ಎರಡನೇ ಸುತ್ತು ಪೌಳಿ, ಪೂರ್ವ, ಪಶ್ಚಿಮದ ಗೋಪುರಗಳು, ಶಿಲೆ, ಕಾಷ್ಠ ಶಿಲ್ಪದಲ್ಲಿ ಅಗ್ರಸಭೆ, ಶಿಲಾಮಯ ತೀರ್ಥ ಮಂಟಪ, ಲೋಹದ ಹೊದಿಕೆಯ ಧ್ವಜಸ್ತಂಭ ನಿರ್ಮಾಣವಾಗಿದೆ. ಉತ್ತರದಲ್ಲಿ ಸುಮಾರು ೨೦ ಅಡಿ ವಿಸ್ತರಿಸಿ ಮೆಟ್ಟಲುಗಳನ್ನು ನಿರ್ಮಿಸಲಾಗಿದೆ.ಎಲ್ಲೂರು ವಿಷ್ಣುಮೂರ್ತಿ ಭಟ್ (ಶಿಲಾ), ಸಂಪಿಗೆ ನಾರಾಯಣ ಆಚಾರ್ಯ (ಕಾಪ), ನಾರಾಯಣ ಗೌಡ, ದಿನೇಶ ಗೌಡ ತಂಡ (ಸಿಮೆಂಟ್), ಉದಯ ಭಟ್ (ವಿದ್ಯುದೀಕರಣ, ಪ್ಲಂಬಿಂಗ್), ಸುನಿಲ್, ಯಾದವ ಗೌಡ ಮತ್ತಿತರರು (ಪೂರಕ ಕಾಮಗಾರಿ) ತೊಡಗಿಸಿಕೊಂಡಿದ್ದಾರೆ. ಹರಿದುಬರುತ್ತಿರುವ ಸ್ವಯಂಸೇವಕರ ಕರಸೇವೆ ಕೆಲಸಗಳನ್ನು ಹಗುರಗೊಳಿಸಿದೆ. ಶಾಸಕ ಉಮಾನಾಥ್ ಕೋಟ್ಯಾನ್ ಮುತುವರ್ಜಿಯಿಂದ ರಸ್ತೆ ಅಭಿವೃದ್ಧಿಯಾಗಿದ್ದು ದೇಗುಲದ ಮುಂಭಾಗದಲ್ಲಿ ಸೇತುವೆ ನಿರ್ಮಿಸಿ ರಸ್ತೆ ನೇರಗೊಳಿಸುವ ಕಾಮಗಾರಿ ಅಂತಿಮ ಹಂತದಲ್ಲಿದೆ.
ಪುತ್ತೆ ಜಾತ್ರೆ: ಮೂರು ಅಂಗಣಗಳ ದೇಗುಲವಿದು. ಇಲ್ಲಿರುವಷ್ಟು ವಿಶಾಲವಾದ ಹೊರಾಂಗಣ ದ.ಕ. ಜಿಲ್ಲೆಯಲ್ಲೇ ವಿರಳ ಮೇಷ ಸಂಕ್ರಮಣದಿಂದ ೧೫ ದಿನಗಳ ಉತ್ಸವ-ಪತ್ತೆ ಜಾತ್ರೆ, ‘ಪುತ್ತೆ’ ಹೆಸರನ್ನು ಮತ್ತೆ ಚಾಲ್ತಿಗೊಳಿಸಲಾಗಿದೆ. ಜೋಡು ಬಲಿ ಮೂರ್ತಿಗಳ ಬಲಿ ಉತ್ಸವ, ವಿಶಿಷ್ಟ ಆಳು ಪಲ್ಲಕಿ ಉತ್ಸವ ಬಲು ವಿಶಿಷ್ಟ ಮೂರೆಕೆರೆ ಬಾಕಿಮಾರು ಗದ್ದೆಯಲ್ಲಿ ರಥೋತ್ಸವ, ‘ಉಮೆ ಗುಂಡಿ’ಯಲ್ಲಿ ಅವಭೃಥ ಆಚರಣೆಯಾಗುತ್ತದೆ.೧೮ ಮಾಗಣೆ-೭೭ ಗ್ರಾಮ:ಮೂಡುಬಿದಿರೆ ಪರಿಸರ ಮಾತ್ರವಲ್ಲ ದೂರದ ಮಳಲಿ ಪೊಳಲಿ, ಪೇಜಾವರ, ತಲಪಾಡಿ, ಉಳ್ಳಾಲ, ಸೋಮೇಶ್ವರ, ಅಮ್ಮೆಂಬಳ, ಬೆಳ್ಳ ಕೈರಂಗಳ, ಬಾಳೆಪುಣಿ, ಮುಂಡೂರು ಮೊದಲಾದ ೧೮ ಮಾಗಣೆಗಳ, ೭೭ ಗ್ರಾಮಗಳ ಸೀಮಾ ವ್ಯಾಪ್ತಿ ದೇವಳಕ್ಕಿದೆ. ...................ಇತಿಹಾಸ:
ಉಳ್ಳಾಲದ ಸೋಮೇಶ್ವರದವರಾದ ಚೌಟ ಆರಸರ ಕುಲದೇವ ಸೋಮನಾಥೇಶ್ವರ. ಇವರ ಆಳ್ವಿಕೆಯ ಅವಧಿ ೧೧೬೦ರಿಂದ ೧೮೬೭ರವರೆಗೆ ವರದಯ್ಯ ದೇವರಾಜ ಚೌಟರು ಪುತ್ತಿಗೆಯಲ್ಲಿ (ಕಾಯರ್‌ಮಂಜ) ಅರಮನೆ ಕಟ್ಟಿ, ಉಳ್ಳಾಲ ಸೋಮೇಶ್ವರದಿಂದ ಸೋಮನಾಥನ ಪ್ರಸಾದ ತರಿಸಿಕೊಂಡು ರಾಜ್ಯಭಾರ ಮಾಡತೊಡಗಿದರು. ಮತ್ತಿನ ದಿನಗಳಲ್ಲಿ ಅಷ್ಟೂ ದೂರದಿಂದ ಪ್ರಸಾದ ತರಿಸುವುದು ಕಷ್ಟವಾಗಿ, ಎರಡನೇ ತಿರುಮಲರಾಯ ಚೌಟರು ೧೨೫೫ರಲ್ಲಿ ಪುತ್ತಿಗೆಯ ಈ ದೇಗುಲ ನಿರ್ಮಿಸಿದರು. ಆಗಿನ ಪುತ್ತಿಗೆ ಗ್ರಾಮದೊಳಗೆ ಈಗಿನ ಮೂಡುಬಿದಿರೆಯ ಮಾರ್ಪಾಡಿ ಗ್ರಾಮವಿದ್ದು ಹತ್ತಾರು ಊರುಗಳಿಗೆ ಕೇಂದ್ರಸ್ಥಾನದಲ್ಲಿಯೇ ಚೌಟರಸರು ಅರಮನೆ ಕಟ್ಟಿ ಇಲ್ಲೇ ರಾಜ್ಯಭಾರ ಮಾಡತೊಡಗಿದ್ದು ಈಗ ಇತಿಹಾಸ. ಕಾರ್ಯಕ್ರಮಗಳು:ಶುಕ್ರವಾರ ಪೂರ್ವಾಹ್ನ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪಾಕ ಮುಹೂರ್ತ, ಧಾರ್ಮಿಕ ಕಾರ್ಯಕ್ರಮಗಳ ಆರಂಭ, ಮಧ್ಯಾಹ್ನ ಗಂಟೆ 2ರಿಂದ ಮೂಡುಬಿದಿರೆ ಚೌಟರ ಅರಮನೆ ಬಳಿ ಸೇರಿ ಭವ್ಯ ಹೊರೆಕಾಣಿಕೆ ಮೆರವಣಿಗೆಯಲ್ಲಿ ಹಸಿರು ಹೊರೆಕಾಣಿಕೆ ಸಮರ್ಪಣೆ ಆಗಲಿದೆ.
ಮಾ.1ರಂದು ಅಥರ್ವಶೀರ್ಷ ಗಣಪತಿ ಯಾಗ, ಮೃತ್ಯುಂಜಯ ಶಾಂತಿಯಾಗ, ಬಿಂಬಶುದ್ದಿ ಸಂಜೆ ಶ್ರೀ ಸೋಮನಾಥೇಶ್ವರ ದೇವರ ಬಿಂಬ ಶಯ್ಯಾಧಿವಾಸ, ಮಾ.2ರಂದು ಪೂ.೧೧.೨೫ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶಿಖರ ಪ್ರತಿಷ್ಠೆ ಹಾಗೂ ಶ್ರೀ ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠಾಪನೆ, ಅಷ್ಟಬಂಧ ಲೇಪನ, ನಿದ್ರಾ ಕುಂಭಾಭಿಷೇಕ, ಪ್ರಸನ್ನ ಪೂಜೆ, ಶ್ರೀ ಮಹಿಷಮರ್ದಿನಿ ಅಮ್ಮನವರಿಗೆ ಬಿಂಬಶುದ್ಧಿ ನೆರವೇರುವುದು.ಸಂಜೆ 4ರಿಂದ : ಗೋದೋಹನ ವಿಧಿ, ಶ್ರೀ ಮಹಿಷಮರ್ದಿನಿ ಅಮ್ಮನವರ ಬಿಂಬ ಶಯ್ಯಾಧಿವಾಸ, ಪರಿವಾರ ದೇವತೆಗಳ ಬಿಂಬಾಧಿವಾಸ, ಶಕ್ತಿದಂಡಕ ಮಂಡಲ ಪೂಜೆ, ಶಿರಸ್ತತ್ವ ಹೋಮ, ಅಧಿವಾಸ ಹೋಮ, ಅಷ್ಟಾವಧಾನ ಸೇವೆ, ಧ್ವಜಾಧಿವಾಸ, ವಾಹನಾಧಿವಾಸ.
ಮಾ. 3ರಂದು ೭.೪೯ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರ ಶಿಖರ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ನಿದ್ರಾಕುಂಭಾಭಿಷೇಕ, ಪರಿವಾರ ದೇವರುಗಳ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿವೆ.ಮಾ.4ರಂದು ಪೂರ್ವಾಹ್ನ 8ರಿಂದ ಪ್ರಾಯಶ್ಚಿತ್ತ ಹೋಮಗಳು, ಶ್ರೀ ರುದ್ರಯಾಗ, ನಾಗಸನ್ನಿಧಿಯಲ್ಲಿ ಕಲಶಾಭಿಷೇಕ, ಆಶ್ಲೇಷಾಬಲಿ, ಪ್ರಸನ್ನ ಪೂಜೆ ಶ್ರೀ ಚಕ್ರಪೂಜೆ, ಶ್ರೀ ನರಸಿಂಹ ದೇವರು ಹಾಗೂ ಶ್ರೀ ಗಣಪತಿ ದೇವರ ಕಲಶಾಧಿವಾಸ ಹಾಗೂ ಅಧಿವಾಸ ಹೋಮಗಳು, ಮಾ.5ರಂದು ಚಂಡಿಕಾಯಾಗ, ಶ್ರೀ ಗಣಪತಿ ಮತ್ತು ಶ್ರೀ ನರಸಿಂಹ ದೇವರಿಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಸಂಜೆ 4ರಿಂದ ಬ್ರಹ್ಮಕಲಶಾಧಿವಾಸ, ಕುಂಭೇಶಕಲಶಾಧಿವಾಸ, ಮಾ. 7ರಂದು 7.37ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಸೋಮನಾಥೇಶ್ವರ ದೇವರು ಹಾಗೂ ಶ್ರೀ ಮಹಿಷಮರ್ದಿನಿ ಅಮ್ಮನವರಿಗೆ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ, ಪ್ರತಿಜ್ಞಾವಿಧಿ, ಮಹಾಪೂಜೆ, ಅವಸೃತಬಲಿ, ಪಲ್ಲ ಪೂಜೆ, ಮಹಾ ಅನ್ನಸಂತರ್ಪಣೆ, ಮಾ. 7ರಂದು ಸಂಪ್ರೋಕ್ಷಣೆ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಸಂಜೆ ಧರ್ಮ ದೈವಗಳ ನೇಮೋತ್ಸವ ಜರಗಲಿದೆ.
ಮಾ.2ರಿಂದ ಮಾ.6ರ ವರೆಗೆ ತಿರುಮಲರಾಯ ಚೌಟ ವೇದಿಕೆಯಲ್ಲಿ ಪ್ರತಿದಿನ ಸಂಜೆ ೬.೩೦ ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಫೆ.28ರಿಂದ ಮಾ.6ರ ವರೆಗೆ ಪ್ರತಿದಿನ ಅಡಿಗಳ್ ಶ್ರೀನಿವಾಸ ಭಟ್ ವೇದಿಕೆಯಲ್ಲಿ ಬೆಳಗ್ಗೆ 8ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ...................ಸುವ್ಯವಸ್ಥೆ, ಸಿದ್ಧತೆ : ಕುಲದೀಪ್ ಎಂ.
ಬ್ರಹ್ಮಕಲಶೋತ್ಸವಕ್ಕೆ 77 ಗ್ರಾಮಗಳ ಲಕ್ಷಾಂತರ ಭಜಕರು ಬರುವ ನಿರೀಕ್ಷೆಯಿದ್ದು ಎಲ್ಲರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ. ತಿಳಿಸಿದ್ದಾರೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 30 ಸಾವಿರ ಆಮಂತ್ರಣಗಳನ್ನು ಈಗಾಗಲೇ ವಿತರಿಸಲಾಗಿದೆ. ಬಾಕಿಮಾರು ಗದ್ದೆಯಲ್ಲಿ 1 ಲಕ್ಷ ಚದರ ಅಡಿ ವ್ಯಾಪ್ತಿಗೆ ಚಪ್ಪರ ಹಾಕಲಾಗಿದೆ. ಅಲ್ಲಿ ಊಟೋಪಚಾರ, ಸಾಂಸ್ಕೃತಿಕ ಕಲಾಪಕ್ಕೆ ರಾಣಿ ಅಬ್ಬಕ್ಕ ವೇದಿಕೆ, ರಾಜಾಂಗಣದಲ್ಲಿ ತಿರುಮಲ ರಾಯ ಚೌಟ ವೇದಿಕೆ, ಅಡಿಗಳ್ ಶ್ರೀನಿವಾಸ್ ಭಟ್ ವೇದಿಕೆಯಲ್ಲಿ ಸಂಕೀರ್ತನಾ ಸೇವೆ ನಡೆಯಲಿದೆ ಎಂದರು.
ಹೊರೆಕಾಣಿಕೆಯಲ್ಲಿ ಶಿಖರ ಕಲಶಗಳು, ದೈವದ ಮಂಚ ಸಹಿತ ಗ್ರಾಮಗಳ ಹೊರೆ ಕಾಣಿಕೆ ಸಾಗಿ ಬರಲಿದೆ ಎಂದರು.ದೇವಳಕ್ಕೆ ಎರಡು ಪ್ರಧಾನ ಪ್ರವೇಶ ದ್ವಾರಗಳು, ಉತ್ತರ ಮತ್ತು ದಕ್ಷಿಣದಲ್ಲೂ ಪ್ರವೇಶಿಸುವ ದ್ವಾರಗಳಿವೆ ಎಂದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಶಿವಪ್ರಸಾದ್ ಆಚಾರ್ ಕುಂಗೂರು , ಜತೆ ಕಾರ್ಯದರ್ಶಿಗಳಾದ ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ಜತೆ ಕಾರ್ಯದರ್ಶಿ ವಾದಿರಾಜ ಮಡ್ಮಣ್ಣಾಯ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎಂ ಬಾಹುಬಲಿ ಪ್ರಸಾದ್ , ಕಾರ್ಯಾಧ್ಯಕ್ಷ ನೀಲೇಶ್ ಶೆಟ್ಟಿ ಪುತ್ತಿಗೆ ಗುತ್ತು ಇದ್ದರು.