ನಾಯಕತ್ವ ಉಳಿಸಿಕೊಳ್ಳಲು ಮಾಜಿ ಶಾಸಕರಿಂದ ಬಾಡಿಗೆ ಪ್ರತಿಭಟನೆ: ಸಿ.ಡಿ.ಗಂಗಾಧರ್

| Published : Aug 26 2024, 01:38 AM IST

ನಾಯಕತ್ವ ಉಳಿಸಿಕೊಳ್ಳಲು ಮಾಜಿ ಶಾಸಕರಿಂದ ಬಾಡಿಗೆ ಪ್ರತಿಭಟನೆ: ಸಿ.ಡಿ.ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್ ಕೊಮುವಾದಿ ಬಿಜೆಪಿ ಪಕ್ಷದ ಜೊತೆ ಮೈತ್ರಿಮಾಡಿಕೊಂಡಿದೆ. ಜಾತಿ ಹೆಸರಿನಲ್ಲಿ ಪ್ರತಿಭಟನೆ ಮಾಡಿ ರಾಜಕಾರಣ ಮಾಡುವ ನಡೆಯನ್ನು ಖಂಡಿಸುತ್ತೇವೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜಾತಿ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ, ಅನಿವಾರ್ಯತೆಯೂ ಬಂದಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಮ್ಮ ವೈಯಕ್ತಿಕ ನಾಯಕತ್ವವನ್ನು ಉಳಿಸಿಕೊಳ್ಳಲು ಬಾಡಿಗೆ ಪ್ರತಿಭಟನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಸಹಾಯ ಪಡೆದು ಪಿ.ಎಂ.ನರೇಂದ್ರಸ್ವಾಮಿ ಅವರು ಶಾಸಕ ಸ್ಥಾನವನ್ನು ಮತ್ತೆ ಪಡೆದಿದ್ದಾರೆಂಬ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಸ್ವಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎನ್ನುವುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡಿರುವುದು ಸರಿಯಲ್ಲ, ನಾನು ಸೋತರೇ ಹಾಡುಗಳನ್ನು ಹಾಡಿ ಜೀವನ ಮಾಡುತ್ತೇನೆಂದು ಹೇಳಿದ್ದ ಅನ್ನದಾನಿ ಹಾಡು ಹೇಳುವುದನ್ನು ಬಿಟ್ಟು ಜನರನ್ನು ದಾರಿ ತಪ್ಪಿಸಲು ಪ್ರತಿಭಟನೆ ನಡೆಸುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಜೆಡಿಎಸ್ ಕೊಮುವಾದಿ ಬಿಜೆಪಿ ಪಕ್ಷದ ಜೊತೆ ಮೈತ್ರಿಮಾಡಿಕೊಂಡಿದೆ. ಜಾತಿ ಹೆಸರಿನಲ್ಲಿ ಪ್ರತಿಭಟನೆ ಮಾಡಿ ರಾಜಕಾರಣ ಮಾಡುವ ನಡೆಯನ್ನು ಖಂಡಿಸುತ್ತೇವೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜಾತಿ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ, ಅನಿವಾರ್ಯತೆಯೂ ಬಂದಿಲ್ಲ ಎಂದರು.

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ರಾಜ್ಯಪಾಲರನ್ನು ಜಾತಿ ಹೆಸರಿನಲ್ಲಿ ಗುರುತಿಸುತ್ತಿರುವುದು ಅಕ್ಷಮ್ಯ ಅಪರಾಧ. ಜಾತಿ ಹೆಸರು ಬಳಸಿರುವ ಕೆಲ ವಿಪಕ್ಷ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಿ.ಎಂ.ನರೇಂದ್ರಸ್ವಾಮಿ 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಶಾಸಕರ ವಿರುದ್ಧ ಉದ್ದೇಶ ಪೂರ್ವಕವಾಗಿ ಪ್ರತಿಭಟನೆ ಮಾಡಿದರೆ ಕಾಂಗ್ರೆಸ್ ಪಕ್ಷ ತಕ್ಕ ಉತ್ತರವನ್ನು ನೀಡಲಿದ್ದೇವೆಂದು ಎಚ್ಚರಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ಮಾಜಿ ಶಾಸಕ ಡಾ. ಕೆ.ಅನ್ನದಾನಿ ರಾಜ್ಯಪಾಲರ ಜಾತಿ ಹೆಸರನ್ನು ಹೇಳಿ ನಿಂದಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಸಾಕ್ಷಿಗುಡ್ಡೆ ಅನ್ನದಾನಿ ಅವರದು ಏನು ಇಲ್ಲ. ನಿಮ್ಮ ಅಧಿಕಾರದ ಅವಧಿಯಲ್ಲಿ ಎರಡುವರೆ ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವುದು ಸಾಧನೆಯಾಗಿದೆ ಎಂದು ಛೇಡಿಸಿದರು.

ಜಿಪಂ ಮಾಜಿ ಸದಸ್ಯ ವಿಶ್ವಾಸ್ ಮಾತನಾಡಿ, ಕೆಆರ್‌ಎಸ್‌ನಿಂದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ನೀರಿನ ಅಭಾವ ಉಂಟಾಗಿದೆ, ಮೇಲ್ಬಾಗದಿಂದ ಹಂತ ಹಂತವಾಗಿ ನೀರನ್ನು ಕೊಡಲಾಗುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವರಾಜು ಮಾತನಾಡಿ, ನಮಗೂ ಇದರ ಎರಡಷ್ಟು ಪ್ರತಿಭಟನೆ ಮಾಡುವ ತಾಕತ್ತು ಇದೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇವೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮುಖಂಡರಾದ ಶಿವಮಾದೇಗೌಡ, ರಾಮಚಂದ್ರಯ್ಯ, ಪ್ರಮೀಳ, ರಾಜಶೇಖರ್, ಬಸವೇಶ್, ಲಿಂಗರಾಜು, ಶಶಿಕುಮಾರ್, ಕುಳ್ಳಚನ್ನಂಕಯ್ಯ, ಕೃಷ್ಣಮೂರ್ತಿ, ಕೃಷ್ಣಮೂರ್ತಿ, ವೇದಮೂರ್ತಿ, ವಿಶ್ವ, ರವೀಂದ್ರ ಸೇರಿದಂತೆ ಇತರರು ಇದ್ದರು.