ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಗಣೇಶೋತ್ಸವ ಮುಗಿಯುವರೆಗೂ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರನ್ನು ಜೈಲಿಗೆ ಹಾಕುವಂತೆ ಹರಿಹರದ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷ ಎಸ್.ರಾಮಪ್ಪ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶೋತ್ಸವಕ್ಕೆ ಡಿಜೆ ಸಿಸ್ಟಂ ನಿಷೇಧಿಸಿದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಡಿಜೆ ಬ್ಯಾನ್ ವಿರುದ್ಧ ಧ್ವನಿ ಎತ್ತಿರುವ ರೇಣುಕಾಚಾರ್ಯ ಮೊದಲು ಹಠ ಬಿಡದಿದ್ದರೆ, ಹಬ್ಬ ಮುಗಿಯುವವರೆಗೂ ವಶಕ್ಕೆ ಪಡೆದು, ಜೈಲಿಗೆ ಹಾಕಬೇಕಾಗುತ್ತದೆ. ತಕ್ಷಣ ರೇಣುಕಾಚಾರ್ಯ ಎಚ್ಚೆತ್ತುಕೊಳ್ಳಲಿ ಎಂದರು.
ಹಬ್ಬ ಮುಗಿಯುವವರೆಗೂ ರೇಣುಕಾಚಾರ್ಯರನ್ನು ಪೊಲೀಸರು ವಶಕ್ಕೆ ಪಡೆಯುವುದು ಒಳ್ಳೆಯದು. ಡಿಜೆ ಸಿಸ್ಟಂನ ಅಪಾಯಕಾರಿ ಸದ್ದಿನಿಂದಾಗಿ ಎಳೆಯ ಕಂದಮ್ಮ, ಮಕ್ಕಳು, ಮಹಿಳೆಯರು, ವಯೋವೃದ್ಧರಿಗೆ ತೀವ್ರ ತೊಂದರೆಯಾಗುತ್ತದೆ. ನಾನೂ ಸಹ ಗಣೇಶ ಪ್ರತಿಷ್ಟಾಪಿಸುವ ಸಂಘ-ಸಂಸ್ಥೆ, ಯುವಜನರು ಯಾವುದೇ ಕಾರಣಕ್ಕೂ ಡಿಜೆ ಬಳಸಬೇಡಿ ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳು ಸಹ ಮದ್ಯ ಸೇವಿಸಲು ಕಲಿತಿದ್ದಾರೆ. ಅಂತಹವರ ಮುಂದಿನ ಭವಿಷ್ಯ, ಜೀವನ, ಬದುಕಿನ ಕಥೆ ಏನು? ಆ ಮಕ್ಕಳನ್ನೇ ನಂಬಿದ ಹೆತ್ತವರು, ಕುಟುಂಬ ವರ್ಗ ಏನಾಗಬೇಡ? ಹಬ್ಬವನ್ನು ಆಚರಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಸಾಂಪ್ರಾದಾಯಿಕ ಡೊಳ್ಳು ಕುಣಿತ, ನಂದಿಕೋಲು ಕುಣಿತ ಸೇರಿದಂತೆ ಜಾನಪದ ಕಲಾ ತಂಡಗಳನ್ನು ಬಳಸಿಕೊಂಡು, ಮೆರವಣಿಗೆ ಮಾಡಲಿ ಎಂದು ಸಲಹೆ ನೀಡಿದರು.
ತಾಕತ್ತಿದ್ದರೆ ಡಿಜೆ ಸಿಸ್ಟಂ ತಡೆಯಿಸಿ, ನಿಲ್ಲಿಸಿ ನೋಡೋಣವೆಂದು ಒಬ್ಬ ಮಾಜಿ ಸಚಿವ ರೇಣುಕಾಚಾರ್ಯ ಸವಾಲು ಹಾಕುತ್ತಾರೆ. ಒಂದು ಜವಾಬ್ಧಾರಿಯುತ ಸ್ಥಾನದಲ್ಲಿದ್ದ ವ್ಯಕ್ತಿ ಹೀಗೆಲ್ಲಾ ಸವಾಲು ಹಾಕುತ್ತಾರೆಂದರೆ ಏನರ್ಥ? ರೇಣುಕಾಚಾರ್ಯ ಸೌಜನ್ಯಯುತವಾಗಿ ಹೇಳಿಕೆ ನೀಡಬೇಕಾಗಿತ್ತು. ಗಣೇಶೋತ್ಸವ ಮುಗಿಯುವವರೆಗೂ ಈ ವ್ಯಕ್ತಿಗೆ ಜೈಲಿಗೆ ಹಾಕಬೇಕು ಎಂದು ಪುನರುಚ್ಛರಿಸಿದರು.ಡಿಜೆ ಬ್ಯಾನ್ ಮಾಡಿದ್ದು ಖುಷಿ ತಂದಿದೆ. ಹಿಂದೂ ಯುವಕರು, ಗಣೇಶೋತ್ಸವದ ಸಂಘಟಕರಿಗೂ ಮನವಿ ಮಾಡುತ್ತೇನೆ. ಸಾಂಪ್ರಾದಾಯಿಕ ಚರ್ಮ ವಾದ್ಯ, ನಂದಿ ಕೋಲು, ಕೀಲು ಕುದುರೆ ಸೇರಿದಂತೆ ಜಾನಪದ ಕಲಾ ತಂಡಗಳನ್ನು ಕರೆಸಿ, ಕಲಾವಿದರಿಗೂ ಅನುಕೂಲವಾಗುತ್ತದೆ. ರೇಣುಕಾಚಾರ್ಯರಂತಹ ವ್ಯಕ್ತಿಗಳಿಗೆ ಗಲಭೆಯಾಗಬೇಕು, ಗಲಾಟೆಯಾಗಬೇಕು, ಅದರಿಂದ ರಾಜಕೀಯ ಲಾಭ ಪಡೆಯುವುದಷ್ಟೇ ಉದ್ದೇಶವಾಗಿರುತ್ತದೆ ಎಂದು ಆರೋಪಿಸಿದರು.
ಡಿಜೆಯಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ಗಲಭೆಗಳಿಗೂ ಅದು ಅವಕಾಶ ಮಾಡಿಕೊಡಬಹುದು. ರೇಣುಕಾಚಾರ್ಯ ಇದನ್ನೆಲ್ಲಾ ಅರಿಯಲಿ ಎಂದು ಕಿವಿಮಾತು ಹೇಳಿದರು.ಹರಿಹರ ನಗರಸಭೆ ಮಾಜಿ ಅಧ್ಯಕ್ಷರಾದ ಕೆಪಿಸಿಸಿ ಸದಸ್ಯ ರೇವಣಸಿದ್ದಪ್ಪ, ಮಾಜಿ ಸದಸ್ಯ ಹಬೀಬುಲ್ಲಾ, ಸನಾವುಲ್ಲಾ, ಹಾಲೇಶಪ್ಪ, ಬೀರಪ್ಪ, ಶ್ರೀನಿವಾಸಮೂರ್ತಿ ಇತರರು ಇದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕನಾಗಿದ್ದರೂ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿತ್ತು. ನನಗೆ ಟಿಕೆಟ್ ತಪ್ಪಲು ನಮ್ಮವರೇ ಕಾರಣವಾಗಿರುವುದೂ ಸ್ಪಷ್ಟವಾಗಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ ಮತ್ತೆ ನನಗೆ ಟಿಕೆಟ್ ತಪ್ಪಿದ್ದೇ ಆದರೆ ಅದೇ ಹರಿಹರ ಕ್ಷೇತ್ರಕ್ಕೆ ಮುಂದಿನ ಬಾರಿ ಟಿಕೆಟ್ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ.ಎಸ್.ರಾಮಪ್ಪ ಕಾಂಗ್ರೆಸ್‌ನ ಮಾಜಿ ಶಾಸಕ