ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಹೊಸೂರ ಗ್ರಾಮ ಪಂಚಾಯತಿಯ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ರೇಣುಕಾ ಭೀಮಗೌಡ ಪಾಟೀಲ, ಉಪಾಧ್ಯಕ್ಷರಾಗಿ ಕೆಂಪಣ್ಣ ಕಾಡಪ್ಪ ಕಾಂಬಳೆ ಆಯ್ಕೆಯಾದರು.ಅಧ್ಯಕ್ಷ ಸ್ಥಾನ ಅ ವರ್ಗ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೇಣುಕಾ ಪಾಟೀಲ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪಣ್ಣ ಕಾಂಬಳೆ, ಮಲ್ಲಿಕಸಾಬ್ ಮುಲ್ತಾನಿ ಸ್ಪರ್ಧಿಸಿದ್ದರಿಂದ ಚುನಾವಣೆ ನಡೆಸಲಾಯಿತು. ಕೆಂಪಣ್ಣ 13 ಮತ ಪಡೆದು ಜಯಶಾಲಿಯಾದರೆ, ಮಲ್ಲಿಕಸಾಬ್ 10 ಮತ ಪಡೆದು ಪರಾಭವಗೊಂಡರು.ಹೊಸೂರ, ಇಂಗಳಿ, ಯರನಾಳ, ಹೂನೂರ, ನಿರ್ವಾನಟ್ಟಿ ಗ್ರಾಮಗಳನ್ನು ಒಳಗೊಂಡಿರುವ ಹೊಸೂರ ಗ್ರಾಮ ಪಂಚಾಯತಿ ಒಟ್ಟು 23 ಸದಸ್ಯರ ಬಲ ಹೊಂದಿದೆ.
ಚುನಾವಣಾಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್.ಹೊಳೆಪ್ಪ, ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಒ ಮಲ್ಲಿಕಾರ್ಜುನ ಗುಡಸಿ ಕರ್ತವ್ಯ ನಿರ್ವಹಿಸಿದರು.ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡ ಬಿ.ಬಿ. ಪಾಟೀಲ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಮುಖಂಡರಾದ ಬಾಳಗೌಡ ನಾಯಿಕ, ಬಾಳಪ್ಪ ರಾಮಗೋನಟ್ಟಿ, ಪ್ರಫುಲಚಂದ್ರ ಪಾಟೀಲ, ಕೆ.ವೆಂಕಟೇಶ, ರಾಜು ಮೂಥಾ, ಲಗಮಣ್ಣ ಮಲ್ಲಾಡಿ, ಗಂಗಾಧರ ದೇಸಾಯಿ, ಬಾಳಪ್ಪ ಖೋತ, ಕಾಶಿಮ್ ಮುಲ್ತಾನಿ, ಬಾಬು ಶಿಂಗೆ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ನೂತನ ಅಧ್ಯಕ್ಷೆ ರೇಣುಕಾ ಪಾಟೀಲ, ಕೆಂಪಣ್ಣ ಕಾಂಬಳೆ ಮಾತನಾಡಿ, ಅಧಿಕಾರವಧಿಯಲ್ಲಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.ಚುನಾವಣೆಯಲ್ಲಿ ತಮ್ಮ ಪರ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು, ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.ಹೊಸದಾಗಿ ಅಧ್ಯಕ್ಷ ಹುದ್ದೆ ದೊರೆತಿರುವುದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹಿರಿಯರ ಮಾರ್ಗದರ್ಶನ, ಸದಸ್ಯರ ಸಲಹೆ-ಸೂಚನೆ, ಸಿಬ್ಬಂದಿಯ ಸಹಕಾರದಿಂದ ಹೊಸೂರ ಗ್ರಾಪಂನ್ನು ಮಾದರಿಯನ್ನಾಗಿ ಮಾಡಲಾಗುವುದು. ಆಯ್ಕೆಗೆ ಶ್ರಮಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ.
- ರೇಣುಕಾ ಪಾಟೀಲ, ಗ್ರಾಪಂ ನೂತನ ಅಧ್ಯಕ್ಷೆ