ಕುಂದಗೋಳ:
ರೇಣುಕಾ ಪಂಚಾಚಾರ್ಯರು ಇಡೀ ಜಗತ್ತಿಗೆ ಪರಶಿವನ ಅವತಾರವಾಗಿ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಮೂಲಕ ಆಧ್ಯಾತ್ಮಿಕ ಬೆಳಕು ನೀಡಿದ ಮಹಾತ್ಮರು ಎಂದು ಕಲ್ಯಾಣಪುರದ ಅಭಿನವ ಬಸವಣ್ಣಜ್ಜನವರು ಹೇಳಿದರು.ಪಟ್ಟಣದ ಶ್ರೀಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ತಾಲೂಕಾಡಳಿತ, ವೀರಶೈವ ಮಹಾಸಭಾ, ತಾಲೂಕು ಜಂಗಮ ವೇದಿಕೆ ಸಹಯೋಗದಲ್ಲಿ ಜರುಗಿದ ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಂಗಮರಿಗೆ ಭಕ್ತರೇ ಪೋಷಕರು. ಅವರ ವೈದಿಕತೆಯ ಮೂಲಕ ಸಂಸ್ಕೃತಿ, ಸದಾಚಾರ ಉನ್ನತಿಯನ್ನು ಬೆತ್ತ ತಿದ್ದುತ್ತದೆ. ಜೋಳಗಿಯಲ್ಲಿ ಭಿಕ್ಷೆಯಾಗಿ ಬಂದಿದ್ದನ್ನು ದೀನರಿಗೆ ಪ್ರಸಾದವಾಗಿ ನೀಡುವ ಮನೋಭಾವ ಇವರಲ್ಲಿದೆ ಎಂದ ಅವರು, ರೇಣುಕಾಚಾರ್ಯರ ಆದರ್ಶಗಳು ಜೀವನಕ್ಕೆ ದಾರಿದೀಪವಾಗಿಲಿ. ನಾವು ಬೆಳೆಸಿದ. ಸಂಪತ್ತು ನಮ್ಮ ಹಿಂದೆ ಬರುವುದಿಲ್ಲ. ಆದರೆ ಗುರು ಕೊಟ್ಟ ಲಿಂಗ ಮಾತ್ರ ನಮ್ಮೊಟ್ಟಿಗಿರುತ್ತದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಆರ್. ಪಾಟೀಲ್, ಸಮಾನತೆ, ಸಂಸ್ಕೃತಿ ಮೂಲಕ ರೇಣುಕಾಚಾರ್ಯರು ನಡೆದು ಬಂದ ದಾರಿ ಅಮೋಘವಾದುದು. ವಿಶಿಷ್ಟ ಧರ್ಮ ಬೋಧನೆಯ ಮೂಲಕ ನಮ್ಮೆಲ್ಲರನ್ನು ಪಾವನಗೊಳಿಸಿದ್ದಾರೆ ಎಂದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಕೋರಿದ ಶ್ರೀರೇಣುಕರು, ಮಾನವನ ಮನಸ್ಸು ಪರಿವರ್ತನೆ ಮಾಡುವುದು. ಕೆಡಕು ಮಾಡಿದವರಿಗೂ ಒಳಿತನ್ನು ಮಾಡುವ ಧರ್ಮ ಪ್ರಚಾರ ಕೈಗೊಂಡು, ವೀರಶೈವ ಧರ್ಮ ಪರಿಪಾಲನೆ ಮಾಡಿ ನಾವೆಲ್ಲ ಒಂದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ದಯಾನಂದ ಕಂಬಾಳಿಮಠ, ಗುರುಸ್ವಾಮಿ ಬಾಳಿಹಳ್ಳಿಮಠ, ಬಸವರಾಜ ಕುಂದಗೋಳಮಠ ಮಾತನಾಡಿದರು. ತಹಸೀಲ್ದಾರ್ ರಾಜು ಮಾವರಕರ, ಜಗದೀಶ ಕಮ್ಮಾರ, ಸತೀಶ ಕೊಬ್ಬಯ್ಯನವರ, ಗುರು ಪಾಟೀಲ್, ಮುತ್ತಣ್ಣ ಅಣ್ಣಿಗೇರಿ ಗಂಗಾಧರಸ್ವಾಮಿ ಛಬ್ಬಿಮಠ, ನಾಗರಾಜ ದೇಶಪಾಂಡೆ, ಚಿನ್ನಪ್ಪ ಮೊರಬದ, ವೀರೇಶ ಭದ್ರಗೌಡ್ರ, ಫಕೀರಪ್ಪ ಕಮ್ಮಾರ, ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.