ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಶ್ರೀ ಗಣೇಶೋತ್ಸವ ವೇಳೆ ದಾವಣಗೆರೆ ನಗರ, ಜಿಲ್ಲೆಯಲ್ಲಿ ಡಿಜೆ ಸೌಂಡ್ ಸಿಸ್ಟಂ ಬ್ಯಾನ್ ಆಗುವುದಕ್ಕೆ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಠ ಮಾಡಿದ್ದೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆರೋಪಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಬಗ್ಗೆಯೇ ರೇಣುಕಾಚಾರ್ಯ ಬಾಯಿಗೆ ಬಂದಂತೆಲ್ಲಾ ಮಾತನಾಡಿದ್ದು, ಬೇಜಾರಾಗಿ ಡಿಜೆ ಬ್ಯಾನ್ ಮಾಡಿದ್ದಾರೆ. ಡಿಜೆ ಸೌಂಡ್ ಬ್ಯಾನ್ ಆಗಿದ್ದರಿಂದ ಡೊಳ್ಳು, ಸಮಾಳ, ನಂದಿಕೋಲು, ನಾಸಿಕ್ ಡೋಲು ಹೀಗೆ ಜಾನಪದ ಕಲಾವಿದರು ಸಹ ಖುಷಿಯಾಗಿದ್ದಾರೆ, ಜನರೂ ನೆಮ್ಮದಿಯಾಗಿದ್ದಾರೆ ಎಂದರು.
ಮತ್ತೊಂದು ಕಡೆ ಡಿಜೆ ಸೌಂಡ್ ಸಿಸ್ಟಂಗೆ ಲಕ್ಷಾಂತರ ರು. ಬಂಡವಾಳ ಹಾಕಿರುವವರಿಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯ ಕ್ರಮಗಳಿಂದಾಗಿ ದುಃಖವಾಗಿದೆ. ಡಿಜೆ ಸಿಸ್ಟಂಗೆ ಬಂಡವಾಳ ಹಾಕಿದ್ದವರಿಗೆ ಬೇರೆ ಕೆಲಸ ನೋಡಿಕೊಳ್ಳುವಂತೆಯೂ ಹೇಳಿದ್ದೇನೆ ಎಂದು ಸಚಿವರು ಪ್ರತಿಕ್ರಿಯಿಸಿದರು.- - - ದಾಖಲೆ ಸಮೇತ ಹರೀಶ್ ಚರ್ಚೆಗೆ ಬರಲಿ ಶಾಮನೂರು ಕುಟುಂಬದಿಂದ ಭೂ ಕಬಳಿಕೆ ಆರೋಪಕ್ಕೆ ಎಸ್ಸೆಸ್ ಮಲ್ಲಿಕಾರ್ಜುನ ಗರಂ ಕನ್ನಡಪ್ರಭ ವಾರ್ತೆ ದಾವಣಗೆರೆ
ನಮ್ಮ ಕುಟುಂಬದ ವಿರುದ್ಧ ಕೆಐಎಡಿಬಿಯಿಂದ ಜಮೀನು ಕಬಳಿಕೆ ಆರೋಪ ಮಾಡಿರುವ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಸೂಕ್ತ ದಾಖಲೆ ಇಟ್ಟುಕೊಂಡು, ನನ್ನ ಬಳಿ ಚರ್ಚೆಗೆ ಬರಲು ಹೇಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.ಎಲುಬಿಲ್ಲದ ನಾಲಿಗೆ ಅಂತಾ ಏನೇನೋ ಮಾತನಾಡುವುದಲ್ಲ. ಮೂರನೇ ಬಾರಿಗೆ ಸದನದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ ಎನಿಸುತ್ತದೆ. ಅಲ್ಲಿ ಕಾರ್ಖಾನೆ ಇದೆ. ಮುಂಚೆ ಜಮೀನಿಗೆ ಅಷ್ಟೊಂದು ಬೆಲೆ ಇರಲಿಲ್ಲ. ಆಗ ಸಾಕಷ್ಟು ಜಮೀನು ತಗೊಂಡಿದ್ದಾರೆ. ಸರ್ಕಾರದಿಂದಲೂ ಆಗ ಜಮೀನು ಮಂಜೂರಾಗಿದೆ. ಖರಾಬು ಜಮೀನನ್ನು ಪಕ್ಕದ ರೈತರು ಉಳುಮೆ ಮಾಡಿಕೊಳ್ಳುತ್ತಾರೆ. ಜಮೀನಿನ ಸರ್ವೇ ಮಾಡಿದಾಗ ಹದ್ದುಬಸ್ತು ಮಾಡುವುದೆಲ್ಲವೂ ಇರುತ್ತದೆ ಎಂದು ತಿಳಿಸಿದರು.
ರೈತರು ಬಿತ್ತನೆ ಮಾಡಿದ್ದನ್ನು ಅಲ್ಲಿ ಬಿತ್ತ ಬೇಡಿ ಅಂತಾ ಹೇಳುವುದಕ್ಕೆ ಆಗುತ್ತದಾ? ಬಿ.ಪಿ.ಹರೀಶರ ತಂದೆ ನಮ್ಮ ತಂದೆಯ ಸಮಕಾಲೀನರು. ಎಂಜಿನಿಯರಿಂಗ್ ಕಾಲೇಜಿಗಾಗಿ ಹರೀಶರ ತಂದೆ ಜಮೀನು ಮಾರಾಟ ಮಾಡಿದ್ದಾಗ ನಾನು ಅದನ್ನು ಖರೀದಿಸಿದ್ದೆ. ಆಗಿನ ಮಾರುಕಟ್ಟೆ ದರದಲ್ಲೇ ಜಮೀನನ್ನು ಖರೀದಿಸಿದ್ದೇನೆ ಎಂದು ಹೇಳಿದರು.- - -
(ಟಾಪ್ ಕೋಟ್) ಹರೀಶ್‌ಗೆ ತನ್ನ ಅಪ್ಪನ ಸಮಾಧಿ ಎಲ್ಲಿದೆ ಅಂತಾನೇ ಗೊತ್ತಿಲ್ಲ. ಈಗ ಮಾತನಾಡುತ್ತಾರೆ. ಎಲುಬಿಲ್ಲದ ನಾಲಿಗೆ ಅಂತಾ ಏನೇನೋ ಮಾತನಾಡುವುದಾ? ಮೊದಲು ಅವರಿಗೆ ಕರೆಕ್ಟ್ ಆಗಿದ್ದು ಮಾತನಾಡಲು ಹೇಳಿ.- ಎಸ್.ಎಸ್. ಮಲ್ಲಿಕಾರ್ಜುನ, ಸಚಿವ
- - -(ಎಸ್‌ಎಸ್ಎಂ)