ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಅಂತರಂಗ ಮತ್ತು ಬಹಿರಂಗ ಪರಿಶುದ್ಧ ಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರ ಧಾರೆ ಸರ್ವರಿಗೂ ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಮಂಗಳವಾರ ತಾಲೂಕಿನ ಕಡೇನಂದಿಹಳ್ಳಿ ಕ್ಷೇತ್ರದ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ಅನಾವರಣ ಮಹಾಮಸ್ತಕಾಭಿಷೇಕ ಪುಷ್ಪಾರ್ಚನೆ ನೆರವೇರಿಸಿದ ನಂತರ ಜರುಗಿದ ಧರ್ಮ ಸಂಸ್ಕೃತಿ ಪುನಶ್ಚೇತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಸ್ಕಾರ ಸಂಸ್ಕೃತಿಗಳ ಮೂಲಕ ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗ ಗುಣ ಬೆಳೆಸಲು ಶ್ರಮಿಸಿದವರು ರೇಣುಕಾಚಾರ್ಯರು.ಜೀವಾತ್ಮ ಪರಮಾತ್ಮನಾಗುವ ಅಂಗ ಲಿಂಗವಾಗುವ ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಬೋಧಿಸಿ ಜೀವನ ಉತ್ಕರ್ಷತೆಗೆ ಕಾರಣರಾದವರು ರೇಣುಕಾಚಾರ್ಯರು.ಗಂಡು ಹೆಣ್ಣು ಉಚ್ಛ ನೀಚ ಮತ್ತು ಬಡವ ಬಲ್ಲಿದ ಎನ್ನದೇ ಎಲ್ಲರ ಶ್ರೇಯಸ್ಸಿಗಾಗಿ ಶ್ರಮಿಸಿದ್ದನ್ನು ಮರೆಯಲಾಗದು.ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಶಿವಜ್ಞಾನದ ಅರಿವು ಮೂಡಿಸುವುದು ಮುಖ್ಯವೆಂದು ಆರೋಗ್ಯ ಪೂರ್ಣ ಸಮಾಜಕ್ಕೆ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ.ಇಂಥ ಭವ್ಯ ಸುಂದರ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ನಿರ್ಮಿಸಿ ಲೋಕಾರ್ಪಣೆಗೈದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾಡಿದ ಸತ್ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ಶಿವ ಪೂಜಾ ತಪೋರತ್ನ ಪ್ರಶಸ್ತಿ ಚಿನ್ನದುಂಗುರ ಮತ್ತು ರೇಶ್ಮೆ ಮಡಿ ಹೊದಿಸಿ ಫಲ ಪುಷ್ಪವಿತ್ತು ಜಗದ್ಗುರುಗಳು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.ಪ್ರಶಸ್ತಿ ಸ್ವೀಕರಿಸಿದ ಸಂಸದ ರಾಘವೇಂದ್ರ ಕೃತಜ್ಞತಾ ಪೂರ್ವಕ ಮಾತುಗಳನ್ನಾಡಿದರು.
ಕಾರ್ಕಳದ ಶಿಲ್ಪಿ ಕೃಷ್ಣಾ ಆಚಾರ್ಯ,ಶಿವಮೊಗ್ಗ ಶಿಲ್ಪಿ ಜೀವನ್ ಕಲಾಸನ್ನಿಧಿ, ಶಿಕಾರಿಪುರ ಪ್ರಥಮ ದರ್ಜೆ ಗುತ್ತಿಗೆದಾರ ದೇವೇಂದ್ರಪ್ಪ ಇವರಿಗೆ ಪ್ರಶಸ್ತಿ ಮತ್ತು ಗುರುರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ,ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಬಿ. ಬಳಿಗಾರ ಉಪಸ್ಥಿತರಿದ್ದರು.ನೇತೃತ್ವ ವಹಿಸಿದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸರ್ವರ ಸಹಕಾರ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದದಿಂದ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಜರುಗಿದ್ದಕ್ಕೆ ಹರುಷ ವ್ಯಕ್ತಪಡಿಸಿದರು.ಈ ಪವಿತ್ರ ಸಮಾರಂಭದಲ್ಲಿ ಕನ್ನೂರು-ಸಿಂಧನೂರು ಸೋಮನಾಥ ಶ್ರೀ, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀ, ಹಾರನಹಳ್ಳಿ ಶಿವಯೋಗಿ ಶ್ರೀ,ಕಾರ್ಜುವಳ್ಳಿ ಸದಾಶಿವ ಶ್ರೀ,ಸಂಗೊಳ್ಳಿ ಗುರುಲಿಂಗ ಶ್ರೀಗಳು,ಕಡೆನಂದಿಹಳ್ಳಿ ವೀರಭದ್ರ ಶ್ರೀಗಳು ಸೇರಿದಂತೆ ಹಲವಾರು ಮಠಾಧೀಶರು ಉಪಸ್ಥಿತರಿದ್ದರು.
ಶಾಂತ ಆನಂದ್ ಪ್ರಾರ್ಥಿಸಿ,ಶಿಕ್ಷಕ ನಾಗರಾಜ ಹುಲ್ಲಿನಕೊಪ್ಪ ಸ್ವಾಗತಿಸಿ ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿ ವಂದಿಸಿದರು.ಕಾರ್ಯಕ್ರಮ ನಂತರ ಜ್ಞಾನೇಶ್ವರ ಬಳ್ಳಾರಿ, ಮೆಹಬೂಬ್ ಸಾಬ್ ಹರ್ಲಾಪುರ ಇವರಿಂದ ಸಾಂಸ್ಕೃತಿಕ ಸಂಗೀತ ಸೌರಭ ಜರುಗಿತು.ಕಾರ್ಯಕ್ರಮಕ್ಕೂ ಮುನ್ನ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು. ನಂತರ ಪುಷ್ಪಾರ್ಚನೆ ಅದ್ದೂರಿಯಾಗಿ ಜರುಗಿತು.
;Resize=(128,128))
;Resize=(128,128))
;Resize=(128,128))
;Resize=(128,128))