ಆಧುನಿಕತೆ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಕಬಡ್ಡಿ ಉತ್ತೇಜಿಸಿ: ಬಸವಲಿಂಗ ಸ್ವಾಮೀಜಿ

| Published : Feb 14 2024, 02:15 AM IST

ಆಧುನಿಕತೆ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಕಬಡ್ಡಿ ಉತ್ತೇಜಿಸಿ: ಬಸವಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆ ಭರಾಟೆಯಲ್ಲಿ ಅಳುವಿನಂಚಿನಲ್ಲಿರುವ ಗ್ರಾಮೀಣ ಸೊಗಡಿನ ದೇಸಿ ಕ್ರೀಡೆ ಕಬಡ್ಡಿ ಆಟದ ಉತ್ತೇಜನಕ್ಕೆ ಎಲ್ಲರೂ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು ಆಧುನಿಕತೆ ಭರಾಟೆಯಲ್ಲಿ ಅಳುವಿನಂಚಿನಲ್ಲಿರುವ ಗ್ರಾಮೀಣ ಸೊಗಡಿನ ದೇಸಿ ಕ್ರೀಡೆ ಕಬಡ್ಡಿ ಆಟದ ಉತ್ತೇಜನಕ್ಕೆ ಎಲ್ಲರೂ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಸಿದ್ದಯ್ಯನ ಕೋಟೆ ಶ್ರೀ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠದ ಆವರಣದಲ್ಲಿ ಮಂಗಳವಾರ ಶ್ರೀ ಮಠದ ರಜತ ಮಹೋತ್ಸವ ಅಂಗವಾಗಿ ಚಿತ್ತರಗಿ ಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕ್ರೀಡಾ ಯುವಕ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿ (ಪುರುಷರ) ಹಾಗೂ ವಾಲಿಬಾಲ್ (ಮಹಿಳೆಯರ) ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಿಂದ ಕೇವಲ ಮಾನಸಿಕ , ದೈಹಿಕ ಸದೃಢವಲ್ಲದೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು. ಪ್ರಸ್ತುತ ಆಧುನಿಕ ಆಟಗಳ ಭರಾಟೆಗೆ ಸಿಲುಕಿ ಗ್ರಾಮೀಣ ಸೊಗಡಿನ ಕಬಡ್ಡಿ ಅವಸಾನದತ್ತ ಸಾಗಿದೆ. ಹಳ್ಳಿಗಾಡಿನ ಜನರ ಬದುಕಿನ ಶ್ರಮ ಸಂಸ್ಕೃತಿ ಪ್ರತೀಕದಂತಿರುವ ಕಬಡ್ಡಿ ಸೇರಿ ಜನಪದ ಕ್ರೀಡೆಗಳನ್ನು ಮುಂದಿನ ತಲೆಮಾರಿಗೂ ಉಳಿಸಿ ಬೆಳೆಲು ಉತ್ತೇಜನ ನೀಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾ ದೇವಿ ಮಾತನಾಡಿ ಕಬಡ್ಡಿ ಆಟ ಶ್ರಮಿಕ ವರ್ಗದ ಬದುಕಿನ ಭಾಗ. ಆದರೆ ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಕಣ್ಮರೆಯಾಗುತ್ತಿದೆ. ಕಬಡ್ಡಿ ಕ್ರೀಡಾ ಕೂಟ ಹೆಚ್ಚು ಆಯೋಜಿಸಬೇಕು. ತೀರ್ಪುಗಾರರು ಸಮಾನವಾಗಿ ತೀರ್ಪು ನೀಡಿ ಪ್ರತಿಭಾವಂತ ಆಟಗಾರರಿಗೆ ನ್ಯಾಯ ಒದಗಿಸಬೇಕು. ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರೂ ಸ್ನೇಹ ಸೌಹಾರ್ದತೆಯಿಂದ ಕ್ರೀಡಾ ಕೂಟ ಯಶಸ್ವಿಗೊಳಿಸಬೇಕು ಎಂದರು.ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೆ. ಬಸಣ್ಣ, ಶ್ರೀ ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ, ಪಿಡಿಒ ನೂರೂಲ್ಲಾ, ಎಸ್. ತಿಮ್ಮಣ್ಣ, ಮರಿಸ್ವಾಮಿ, ಮಂಜಣ್ಣ, ಕೊಲ್ಲಾರಪ್ಪ, ಮೂರ್ತಿ, ಶಿವನಗೌಡ, ಲಕ್ಷ್ಮಣ (ಅಪ್ಪಿ), ತಿಪ್ಪೇಸ್ವಾಮಿ, ಡಿ.ಮಲ್ಲಿಕಾರ್ಜುನ, ಗಾದ್ರಿ ಪಾಲನಾಯಕ ಇದ್ದರು.