ಸಾರಾಂಶ
- ಸೋಲಾರ್ ಪ್ಲಾಂಟ್ ನೆಪದಲ್ಲಿ ಪ್ರಧಾನಿ ಹೆಸರು ಎಳೆದುರಬೇಡಿ ಎಂದು ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಜನ-ಜಾನುವಾರುಗಳಿಗೆ ಮೀಸಲಿರಿಸಿರುವ ಭೂಮಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಲು ಹೊರಟರೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮಂಗಳವಾರ ಅಧಿಕಾರಿಗಳು ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಸರ್ಕಾರಿ ಜಮೀನು ಗುರ್ತಿಸಿ, ಗಡಿ ಕಂಬ ನೆಡುತ್ತಿದ್ದ ಸುದ್ದಿ ತಿಳಿದು, ಮಧ್ಯಾಹ್ನ ಸ್ಥಳೀಯ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ಥಳಕ್ಕೆಆಗಮಿಸಿ ಧರಣಿ ನಡೆಸಿದರು. ಸಂತ್ರಸ್ತ ರೈತರು ಸಹ ಮಾಜಿ ಸಚಿವರ ಬಳಿ ತಮ್ಮ ಸಂಕಷ್ಟ ತೋಡಿಕೊಂಡರು.
ಅಧಿಕಾರಿಗಳ ಕ್ರಮ ಸಹಿಸಲ್ಲ:ಮಾಜಿ ಸಚಿವರು ಮಾತನಾಡಿ, ಕೇಂದ್ರ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಿ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತದೆ. ರೈತರು ಉಳುಮೆ ಮಾಡುವ ಜಮೀನುಗಳಿಂದ ಅವರನ್ನು ಒಕ್ಕಲೆಬ್ಬಿಸಿ ಎಂದು ಎಲ್ಲಿಯೂ ಸರ್ಕಾರ ಹೇಳಿಲ್ಲ. ಆದರೆ ಅಧಿಕಾರಿಗಳು ಖಾಸಗಿ ಕಂಪನಿಗಳೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ಕ್ರಮ ಸಹಿಸುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳಿದ್ದರು.
ಅಧಿಕಾರಿಗಳು ಸರ್ವೇ ಕಾರ್ಯ ಸ್ಥಗಿತಗೊಳಿಸಿ, ಜಮೀನು ರೈತರಿಗೆ ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಉಳುಮೆ ಮಾಡುತ್ತಿರುವ ರೈತರು ಹಾಗೂ ಗ್ರಾಮಸ್ಥರ ಜೊತೆಗೂಡಿ ತಾಲೂಕು ಕಚೇರಿ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.ಪ್ರಧಾನಿ ಹೆಸರಿಗೆ ಧಕ್ಕೆ ತರಬೇಡಿ:
ಮಾಜಿ ಸಚಿವ ರೇಣುಕಾಚಾರ್ಯ ಮತ್ತು ರೈತರು, ಬೆಂಬಲಿಗರು ಧರಣಿ ನಡೆಸಿದ ಸಂದರ್ಭ ಉಪವಿಭಾಗಾಧಿಕಾರಿ ಅಭಿಷೇಕ್ ಪಿಎಂ ಕುಸುಮ್ ಯೋಜನೆ ಪ್ರಯೋಜನ ಬಗ್ಗೆ ವಿವರಿಸಲು ಮುಂದಾದರು. ಇದು ಸ್ಥಳೀಯ ರೈತರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಆಗ ರೇಣುಕಾಚಾರ್ಯ ಅವರು, ಯೋಜನೆ ನೆಪದಲ್ಲಿ ಪ್ರಧಾನಿ ಹೆಸರು ಮಧ್ಯೆ ಎಳೆಯಬೇಡಿ. ಇದು ಯೋಜನೆ ಹೆಸರು ಮಾತ್ರ. ಮೋದಿ ಅವರು ಇದೇ ಅರಬಗಟ್ಟೆ ಜಮೀನಿನಲ್ಲಿಯೇ ಸೋಲಾರ್ ಪ್ಲಾಂಟ್ ಮಾಡಿ ಎಂದು ಹೇಳಿಲ್ಲ. ಆದ್ದರಿಂದ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಪ್ಲಾಂಟ್ ನಿರ್ಮಾಣ ಮಾಡಿ ಎಂದು ತಾಕೀತು ಮಾಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಶಿವು ಹುಡೇದ್, ಎಸ್.ಎಸ್. ಬೀರಪ್ಪ ರವಿಕುಮಾರ್, ಅರಕೆರೆ ನಾಗರಾಜ್, ಉಳುಮೆ ಮಾಡುತ್ತಿದ್ದ ರೈತರು, ಅರಬಗಟ್ಟೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
- - - -18ಎಚ್.ಎಲ್.ಐ2:ಹೊನ್ನಾಳಿ ತಾಲೂಕಿನ ಅರಬಗಟ್ಟೆ ಸರ್ಕಾರಿ ಜಮೀನಿನಲ್ಲಿ ಸೋಲಾರ್ ಪ್ಲಾಂಟ್‌ಗೆ ಜಮೀನು ಸರ್ವೆ ಕಾರ್ಯ ವಿಷಯ ರೈತರಿಂದ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ರೇಣುಕಾಚಾರ್ಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಬೆಂಬಲಿಗರೊಂದಿಗೆ ಧರಣಿ ನಡೆಸಿದರು.