ಕನ್ನಡಪ್ರಭ ವಾರ್ತೆ ವಿಜಯಪುರ ಶ್ರೀ ರೇಣುಕಾಚಾರ್ಯರು ಉದ್ಭವ ಮೂರ್ತಿಗಳಾಗಿದ್ದು, ವೀರಶೈವ ಧರ್ಮ ಸ್ಥಾಪನೆ ಮಾಡಿ ಯಾವುದೇ ಜಾತಿಗೆ ಸೀಮಿತವಾಗದೆ ಮಾನವ ಕುಲಕ್ಕೆ ಗುರುವಾಗಿದ್ದರು ಎಂದು ಶಿವಾನಂದಶಾಸ್ತ್ರೀ ಹಿರೇಮಠ ತಮ್ಮ ಉಪನ್ಯಾಸದಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶ್ರೀ ರೇಣುಕಾಚಾರ್ಯರು ಉದ್ಭವ ಮೂರ್ತಿಗಳಾಗಿದ್ದು, ವೀರಶೈವ ಧರ್ಮ ಸ್ಥಾಪನೆ ಮಾಡಿ ಯಾವುದೇ ಜಾತಿಗೆ ಸೀಮಿತವಾಗದೆ ಮಾನವ ಕುಲಕ್ಕೆ ಗುರುವಾಗಿದ್ದರು ಎಂದು ಶಿವಾನಂದಶಾಸ್ತ್ರೀ ಹಿರೇಮಠ ತಮ್ಮ ಉಪನ್ಯಾಸದಲ್ಲಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ ಶ್ರೀ ರೇಣುಕಾಚಾರ್ಯರ ಜಯಂತಿಯಲ್ಲಿ ಅವರು ಮಾತನಾಡಿದರು. ರೇಣುಕಾಚಾರ್ಯರು ಮೊದಲು ಲಿಂಗ ದೀಕ್ಷೆ ಮಾಡಿದ್ದು ಕಬ್ಬಲಿಗ ಜಾತಿಯ ಅಗಸ್ತ್ಯ ಮಹರ್ಷಿಗಳಿಗೆ. ಶಿವನು ಭೂಲೋಕದಲ್ಲಿ ಅರಾಜಕತೆಯನ್ನು ಕಂಡು ತನ್ನ ಪಂಚಮುಖಗಳನ್ನು ಭೂಲೋಕದಲ್ಲಿ ಗಣಾಧೀಶರಾಗಿ ಅವತರಿಸುವಂತೆ ಮಾಡಿ ಜಗತ್ತಿನಲ್ಲಿ ವೀರಶೈವಧರ್ಮ ಸ್ಥಾಪನೆ ಆಗುವಂತೆ ಮಾಡಿದರು ಎಂದರು.

ಸಧ್ಯ ಇರುವ ಪಂಚಾಚಾರ್ಯರು ಶಿವನ ಅವತಾರ ಪುರುಷರಾಗಿದ್ದಾರೆ. ರೇಣುಕಾಚಾರ್ಯರು ವೀರಶೈವ ಸಂಪ್ರದಾಯದ ಆದಿಪುರುಷರು. ಇತಿಹಾಸದ ಪ್ರಕಾರ ಕ್ರಿಸ್ತಶಕ ಐದನೇ ಶತಮಾನದಲ್ಲಿ ಇಂದಿನ ತೆಲಂಗಾಣದ ಕೊಲ್ಲಿ ಪಾಕ ಪ್ರದೇಶದಲ್ಲಿ ಅವತರಿಸಿದರು. ಅವರ ಜಯಂತಿಯನ್ನು ಪಾಲ್ಗುಣ ಮಾಸದ ಶುಕ್ಲ ಪಕ್ಷದ ತ್ರಯೋದಸಿ ತಿಥಿಯಂದು ಆಚರಿಸಲಾಗುತ್ತದೆ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್.ಕೆ.ಸಾವಳಗಿಮಠ ವಂದಿಸಿದರು. ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವ ಹಿರೇಮಠ, ಮುಖಂಡರಾದ ಗುರು ಗಚ್ಚಿನಮಠ, ಎನ್.ಆರ್.ಮಠ, ಡಾ.ಪ್ರಸಾದ ವಸ್ತ್ರದ, ವಿನೋದ ಜಂಗಿನ, ಬಸಯ್ಯ ಚಿನ್ನಕಾಳಿಮಠ, ಶಾಂತಿವೀರ ಹಿರೇಮಠ, ರುದ್ರಯ್ಯ ಮಹಾಂತಮಠ, ಗುರಯ್ಯ ಯಾದವಾಡಮಠ, ಗುರುಸಿದ್ಧಯ್ಯ ಹಿರೇಮಠ ಸೇರಿದಂತೆ ಅನೇಕರು ಹಾಜರಿದ್ದರು.

-----------

ಬಾಕ್ಸ್....

ಕಲಾ ತಂಡದೊಂದಿಗೆ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಜಯಪುರ ತಹಶೀಲ್ದಾರ ಪ್ರಶಾಂತ ಚನ್ನಗೊಂಡ ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಸಾವಿರಾರು ಜನರೊಂದಿಗೆ ಭಾವಚಿತ್ರದ ಮೆರವಣಿಗೆಯು ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.