ಹಿರೇಕೆರೂರು: ಧರ್ಮ ಸಂರಕ್ಷಣೆಗಾಗಿ ಅವತರಿಸಿ, ಶಿವಜ್ಞಾನದ ಬೆಳಕನ್ನು ಬೀರುವ ಮೂಲಕ ಕರ್ಮವನ್ನು ಕಳೆದು ಸಕಲ ಸಮುದಾಯಗಳ ಹಿತವನ್ನು ಬಯಸಿ ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದು ಕಡೇನಂದಿಹಳ್ಳಿಯ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಸರ್ವಜ್ಞ ಕಲಾ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.ಜಗದ್ಗುರು ರೇಣುಕಾಚಾರ್ಯರು ಶಿವನ ಅಪ್ಪಣೆ ಮೇರೆಗೆ ಭೂ ಲೋಕದಲ್ಲಿ ಆವಿರ್ಭವಿಸಿ ಮನುಕುಲದ ಉದ್ಧರಾಕ್ಕೆ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು.ಜನ ಸಮುದಾಯದಲ್ಲಿ ಧಾರ್ಮಿಕ, ಸಾಮಾಜಿಕ ಸತ್ಕ್ರಾಂತಿಗೈದು ಕೊಲನುಪಾಕ ಸ್ವಯಂಭೂ ಶ್ರೀ ಸೋಮೇಶ್ವರ ಸುಕ್ಷೇತ್ರದಲ್ಲಿ ಹದಿನೆಂಟು ಜಾತಿ ಜನಾಂಗಗಳ ಧಾರ್ಮಿಕ ಕೇಂದ್ರಗಳನ್ನು ಹುಟ್ಟುಹಾಕಿ ಸಂಸ್ಕಾರ-ಸಂಸ್ಕೃತಿ ಅರುಹಿದ ಯುಗಪುರುಷರು, ಪುರುಷರಂತೆ ಮಹಿಳೆಯರಿಗೂ ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟವರು. ಕಾಯಕ ಮತ್ತು ದಾಸೋಹ ಭಾವನೆ ಮೂಲಕ ಕ್ರಿಯಾತ್ಮಕ ಬದುಕಿಗೆ ಕರೆಕೊಟ್ಟವರು ಜಗದ್ಗುರು ರೇಣುಕಾಚಾರ್ಯರು ಅವರ ಬೋಧನೆಗಳನ್ನು, ಆಚರಣೆ, ಸಂಕಲ್ಪಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು. ಶ್ರೀ ಜಗದ್ಗುರು ರೇಣುಕಾಚಾರ್ಯರ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ, ನ್ಯಾಯವಾದಿ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ, ಸಾಮರಸ್ಯ ಸೌಹಾರ್ದ, ಸಹಬಾಳ್ವೆಯ ಬದುಕನ್ನು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗ ಯುಗಗಳಲ್ಲಿ ಅವತರಿಸಿದ ಮಾನವತಾವಾದಿಯಾಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್‌ ಎಂ.ರೇಣುಕಾ ರೇಣುಕಾಚಾರ್ಯರು ಮಾನವ ಕಲ್ಯಾಣಕ್ಕೆ ಶ್ರಮಿಸಿದ್ದರು. ಜನರಿಗೆ ಸನ್ಮಾರ್ಗ ತೋರಿದ ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಷಣ್ಮುಖಯ್ಯ ಮಳಿಮಠ, ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕರಬಸಯ್ಯ ಬಸರೀಹಳ್ಳಿಮಠ, ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ನ್ಯಾಯವಾದಿ ಸಂಜೀವಯ್ಯ ಕಬ್ಬಿಣಕಂಥಿಮಠ, ವೀರಯ್ಯ ಹಿರೇಮಠ, ಬಿಇಒ ಎನ್.ಶ್ರೀಧರ, ಟಿಎಚ್‌ಒ ಡಾ. ಝಡ್.ಆರ್.ಮಕಾನ್ದಾರ್, ಎಂ.ಎಂ. ಹುಲ್ಮನಿ, ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ರಾಜಶೇಖರಯ್ಯ ಮಹಾಂತಿಮಠ, ಚನ್ನೇಶ ಮಠದ, ಪ್ರಶಾಂತ ಹಿರೇಮಠ, ಡಾ. ಬಸವರಾಜ ಪೂಜಾರ, ವೀರಭದ್ರಯ್ಯ ಮಠದ, ಶಿದ್ಧಲಿಂಗಯ್ಯ ಹಿರೇಮಠ, ಶಿರಸ್ತೇದಾರ ಎ.ಎಸ್. ಆಪಿನಕೊಪ್ಪ, ನಾಗರಾಜ ಕಟ್ಟಿಮನಿ, ಸೇರಿದಂತೆ ಜಂಗಮ ಸಮಾಜ ಬಾಂಧವರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.