ಮಣ್ಣಿನಿಂದ ಮಾಡುವ ಗಣಪನಿಗೆ ಜೀವ ತುಂಬುವ ಕಲೆ ರೇಣುಕಪ್ಪನವರಿಗೆ ಕರಗತವಾಗಿದೆ. ಒಂದು, ಎರಡು, ಮೂರು ಅಡಿ ಗಣಪನ ಮೂರ್ತಿಯ ಜೊತೆಗೆ 5–6 ಅಡಿ ಎತ್ತರದ ಮೂರ್ತಿಗಳವರೆಗೆ, ವಿಭಿನ್ನವಾದ ಗಣೇಶ ಮತ್ತು ಗೌರಿ ವಿಗ್ರಹಗಳನ್ನು ತಯಾರಿಸುತ್ತಾರೆ.
ರುದ್ರೇಶ್ ಹೊನ್ನೇನಹಳ್ಳಿ
ಕನ್ನಡಪ್ರಭ ವಾರ್ತೆ ದಾಬಸ್ಪೇಟೆಸಾಧಿಸುವ ಛಲ ಮತ್ತು ಅದಕ್ಕೆ ಸರಿಯಾದ ಪ್ರತಿಭೆ ಇದ್ದರೆ ಎಲ್ಲ ನ್ಯೂನತೆಯನ್ನು ಮೀರಿ ಬೆಳೆಯಬಹುದು ಎಂಬುದಕ್ಕೆ ಸೋಂಪುರ ಹೋಬಳಿಯ ಕಂಬಾಳು ಗ್ರಾಮದ ಗಣೇಶ ತಯಾರಿಸುವ ರೇಣುಕಪ್ಪನವರೇ ಸಾಕ್ಷಿ. ಇವರಿಗೆ ಕಿವಿ ಕೇಳಿಸುವುದಿಲ್ಲ. ಮಾತು ಬರುವುದಿಲ್ಲ. ಈ ಕೊರತೆಯನ್ನು ಮೀರಿ ಸುಂದರ ಗಣಪತಿ ಮೂರ್ತಿಗಳನ್ನು ಸೃಷ್ಟಿಸಿದ್ದಾರೆ.
ತಮ್ಮ ಮನೆಯ ಮುಂದೆ ಪ್ರತಿವರ್ಷ ನೂರಾರು ಗೌರಿ-ಗಣೇಶ ಮೂರ್ತಿಗಳನ್ನು ತಯಾರಿಸಿ ಅವರು ಗಮನ ಸೆಳೆಯುತ್ತಿದ್ದಾರೆ. ಬೆಂಗಳೂರು, ತುಮಕೂರು, ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ವಿವಿಧ ಊರುಗಳಿಗೂ ಇಲ್ಲಿಂದ ನೂರಾರು ಮೂರ್ತಿಗಳು ಸಾಗಣೆಯಾಗುತ್ತವೆ. ಸುಮಾರು 40 ವರ್ಷಗಳಿಂದಲೂ ಗಣೇಶ ಮೂರ್ತಿ ತಯಾರಿಕಾ ಕಾಯಕವನ್ನೇ ಅವರು ತಮ್ಮ ಜೀವನದ ಆಧಾರವಾಗಿಸಿಕೊಂಡಿದ್ದಾರೆ.ವಿಭಿನ್ನ ಹಾಗೂ ಸರಳ ಗಣಪ:
ಮಣ್ಣಿನಿಂದ ಮಾಡುವ ಗಣಪನಿಗೆ ಜೀವ ತುಂಬುವ ಕಲೆ ರೇಣುಕಪ್ಪನವರಿಗೆ ಕರಗತವಾಗಿದೆ. ಒಂದು, ಎರಡು, ಮೂರು ಅಡಿ ಗಣಪನ ಮೂರ್ತಿಯ ಜೊತೆಗೆ 5–6 ಅಡಿ ಎತ್ತರದ ಮೂರ್ತಿಗಳವರೆಗೆ, ವಿಭಿನ್ನವಾದ ಗಣೇಶ ಮತ್ತು ಗೌರಿ ವಿಗ್ರಹಗಳನ್ನು ತಯಾರಿಸುತ್ತಾರೆ.ಗಾರ್ಮೆಂಟ್ಸ್‌ನಲ್ಲಿ ಕಾಯಕ:
ಮೂರು ತಿಂಗಳು ಗಣೇಶ ಮೂರ್ತಿಗಳ ಸಿದ್ಧಪಡಿಸುವ ಕೆಲಸ ಮಾಡುವ ರೇಣುಕಪ್ಪ ಅವರು ಉಳಿದ ಸಮಯದಲ್ಲಿ ಗಾರ್ಮೆಂಟ್ಸ್‌ನಲ್ಲಿ ಟೈಲರ್ ಕಾಯಕದಲ್ಲಿ ನಿರತರಾಗಿರುತ್ತಾರೆ. ನಡುವೆ ಬೇರೆ ವಿಗ್ರಹಗಳು ಬೇಕು ಎಂದು ಬೇಡಿಕೆ ಬಂದರೆ ಅವುಗಳನ್ನು ಸಿದ್ಧಪಡಿಸಿಕೊಡುತ್ತಾರೆ.ಇಟ್ಟಿಗೆ ಕಾರ್ಖಾನೆಗಳು ಖಾಲಿ ಮಾಡಿರುವ ಸ್ಥಳದಿಂದ ಮೂವತ್ತರಿಂದ ನಲವತ್ತು ಕಿ.ಮೀ ದೂರದಿಂದ ಜೇಡಿಮಣ್ಣನ್ನು ತಂದು, ಅದನ್ನು ಹದಗೊಳಿಸಿ ವೈವಿಧ್ಯಮಯ ಮಾದರಿ ಆಕರ್ಷಕ ಮೂರ್ತಿಗಳನ್ನು ರೂಪಿಸುತ್ತಾರೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಕೇವಲ ವಾಟರ್ ಪೇಂಟ್ ಬಳಸಿ ಪರಿಸರಕ್ಕೆ ಪೂರಕವಾದ ಮೂರ್ತಿಗಳನ್ನು ಸಿದ್ಧಪಡಿಸುವುದು ಇವರ ವಿಶೇಷತೆಯಾಗಿದೆ.
ಮಣ್ಣಿನ ಗಣಪತಿ ತಯಾರಕರಿಗೆ ಪಿಒಪಿ ಮೂರ್ತಿಗಳು ಆರ್ಥಿಕ ಹೊಡೆತ ನೀಡಿರುವುದು ಸುಳ್ಳಲ್ಲ. ಆದರೂ ಪಿಒಪಿಯ ಮೊರೆ ಹೋಗದೆ, ಅದನ್ನು ಮೀರಿಸುವ ಸಾಂಪ್ರದಾಯಿಕ ಶೈಲಿಯ ನೈಸರ್ಗಿಕ ಹಾಗೂ ಆಕರ್ಷಕ ಗಣಪನನ್ನು ತಯಾರಿಸಿ ರೇಣುಕಪ್ಪ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಸಿದ್ದಗಂಗಾ ಮಠಕ್ಕೂ ಕೊಡುಗೆ:
ಪ್ರತಿಷ್ಠಿತ ಶ್ರೀ ಸಿದ್ದಗಂಗಾ ಮಠದಲ್ಲಿಯೂ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ಆಚರಿಸುವುದು ವಾಡಿಕೆ. ಅದರಂತೆ ರೇಣುಕಪ್ಪನವರು ಸುಮಾರು ವರ್ಷಗಳಿಂದ ಸಿದ್ದಗಂಗಾ ಮಠಕ್ಕೆಂದೇ ಒಂದು ಗಣಪನ ಮೂರ್ತಿ ತಯಾರಿಸಿ ಉಚಿತವಾಗಿ ನೀಡುವ ಪದ್ಧತಿ ರೂಢಿಸಿಕೊಂಡಿದ್ದಾರೆ.