ಸಾರಾಂಶ
ಲಕ್ಷ್ಮೇಶ್ವರ: ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು. ಇವರ ತತ್ವ, ಬದುಕಿನ ಚರಿತ್ರೆ, ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ. ಅವರ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿವೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರು ಹಾಗೂ ಅಖಿಲ ಭಾರತ ಶಿವಾಚಾರ್ಯರ ಸಂಘದ ಅಧ್ಯಕ್ಷರು ವಿಮಲರೇಣುಕ ವೀರಮುಕ್ತಿಮುನಿ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ಪಟ್ಟಣದ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.ಮಾನವ ಧರ್ಮ ಪಂಚಾಚಾರ್ಯರ ಜಗದ್ಗುರುಗಳ ಧರ್ಮವಾಗಿದೆ. ಮಾನವ ಧರ್ಮ ರಕ್ಷಿಸಿದಲ್ಲಿ ಮನುಕುಲಕ್ಕೆ ಶಾಂತಿ ಸಿಗುವುದು. ಈ ನಿಟ್ಟಿನಲ್ಲಿ ಜಗದ್ಗುರು ರೇಣುಕಾಚಾರ್ಯರು ಮನುಷ್ಯಕುಲಕ್ಕೆ ಮಾಡಿದ ಮಹಾನ್ ಕಾರ್ಯ ಎಂದೆಂದಿಗೂ ಸ್ಮರಣೀಯವಾಗಿದೆ. ವೀರಶೈವ ಧರ್ಮ ಅತ್ಯಂತ ಪ್ರಾಚೀನ. ಇದರ ಇತಿಹಾಸ ಮತ್ತು ಪರಂಪರೆ ಅಪೂರ್ವ- ಅಮೋಘ. ಕಾಯಕ ಮತ್ತು ದಾಸೋಹ ಭಾವನೆ ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ. ಮಾನವ ಧರ್ಮವೇ ಶ್ರೇಷ್ಠವೆಂದು ಸಾರಿದ ಜಗದ್ಗುರು ರೇಣುಕಾಚಾರ್ಯ ಅವರ ಆದರ್ಶ ಚಿಂತನೆಗಳು ಮುಂದಿನ ಪೀಳಿಗೆಗೂ ದಾರಿದೀಪವಾಗಿವೆ ಎಂದ ಅವರು ವೀರಶೈವ ಧರ್ಮ ಪುರಾತನವಾಗಿದ್ದು ಸುಮಾರು ೮ನೇ ಶತಮಾನಕ್ಕಿಂತಲೂ ಮೊದಲೆ ಈ ಧರ್ಮವಿದೆ, ೧೨ನೇ ಶತಮಾನದಲ್ಲಿ ಬಂದ ಬಸವಣ್ಣನವರು ವೀರಶೈವ ಧರ್ಮಕ್ಕೆ ಮಾರು ಹೋಗಿ ಗುರುಗಳಿಂದ ಮಂತ್ರ ದೀಕ್ಷೆ ಪಡೆದು ವೀರಶೈವ ಸಮಾಜ ಕಲ್ಯಾಣಕ್ಕೆ ಶ್ರಮಿಸಿದರು ಎಂದು ನುಡಿದ ಅವರು ಜ.ರೇಣುಕಾಚಾರ್ಯರ ಜಯಂತಿ ಆಚರಣೆಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿ ಕಾರ್ಯಕ್ರಮ ಮಾಡಬೇಕು ಎಂದು ಸಲಹೆ ನೀಡಿದರು.ನೇತೃತ್ವ ವಹಿಸಿದ್ದ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ರೇಣುಕರು ಅನುಗ್ರಹಿಸಿದ ಶಿವಾದೈತ ಸಿದ್ಧಾಂತ ಸಾರವೇ ವೀರಶೈವ ಧರ್ಮವಾಗಿದೆ ಎಂದು ನುಡಿದರು.ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಮ್. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಚನ್ನಪ್ಪ ಕೋಲಕಾರ, ಆನಂದ ಮೆಕ್ಕಿ, ಚಂಬಣ್ಣ ಬಾಳಿಕಾಯಿ, ಜಿ.ಎಸ್. ಬಾಳಿಹಳ್ಳಿಮಠ, ಬಿ.ಟಿ. ಪಾಟೀಲ, ಮುರಗಯ್ಯ ಹಿರೇಮಠ, ರುದ್ರುಯ್ಯ ಘಂಟಾಮಠ, ಗುರುಲಿಂಗಯ್ಯ ಹಿರೇಮಠ, ಬಸವೇಶ ಮಹಾಂತಶೆಟ್ಟರ, ಗುರಣ್ಣ ಪಾಟೀಲಕುಲಕರ್ಣಿ, ಬಸವರಾಜ ಮೆಣಸಿನಕಾಯಿ, ಅಶ್ವಿನಿ ಅಂಕಲಕೋಟಿ, ನಿಂಗಪ್ಪ ಜಾವೂರ, ಶಿವಯೋಗಿ ಅಂಕಲಕೋಟಿ, ಬಸಣ್ಣ ಬೆಂಡಿಗೇರಿ, ಜಿ.ಆರ್. ಲಕ್ಕುಂಡಿಮಠ, ಹೇಮಗೀರಿಮಠ, ನಿಂಗಪ್ಪ ಬನ್ನಿ, ಶಿವಲಿಂಗಯ್ಯ ಹಾಲೇವಾಡಿಮಠ, ಎಸ್.ವಿ. ಅಂಗಡಿ, ಆನಂದ ಸೇರಿದಂತೆ ಅನೇಕರಿದ್ದರು.ಸೋಮವಾರ ಪ್ರಾಥಃಕಾಲ ಶ್ರೀ ಜ. ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ ನಂತರ ಪಂಚಾಚಾರ್ಯರ ಧ್ವಜಾರೋಹಣ ಕಾರ್ಯಕ್ರಮ, ಶ್ರೀ ಇಟಗಿ ಬಸವೇಶ್ವರ ದೇವಸ್ಥಾನದಿಂದ ಸಕಲ ವಾದ್ಯವೈಭವಗಳೊಂದಿಗೆ ಶ್ರೀ ಜ.ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳ ಮೂಲಕ ಶ್ರೀ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದವರೆಗೆ ಸಕಲ ವಾದ್ಯ ವೈಭವಗಳು, ನೂರಾರು ಮಹಿಳೆಯರ ಪೂರ್ಣಕುಂಭಗಳೊಂದಿಗೆ ಅದ್ಧೂರಿಯಾಗಿ ಜರುಗಿತು.