ಜೈನ್ ಕಾಲೋನಿ ರಸ್ತೆ ದುರಸ್ತಿ ಮಾಡಿ

| Published : Sep 30 2024, 01:17 AM IST

ಸಾರಾಂಶ

ಜಿಲ್ಲಾಡಳಿತ, ನಗರಸಭೆಗೆ ಡಾ.ಎಚ್.ಕೆ.ಎಸ್.ಸ್ವಾಮಿ ಮನವಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹತ್ತಾರು ವರ್ಷಗಳಿಂದ ಗುಂಡಿ ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿರುವ ಆರ್‌ಎಂಸಿ ಜೈನ್ ಕಾಲೋನಿ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಅವರು ಜಿಲ್ಲಾಡಳಿತ, ನಗರಸಭೆಗೆ ಒತ್ತಾಯಿಸಿದ್ದಾರೆ.

ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಈ ಪ್ರಮುಖ ರಸ್ತೆಗೆ, ಬ್ಯಾಂಕ್, ಶಾಲೆ, ಮಾರುಕಟ್ಟೆ ಬರಲಿವೆ. ಆದರೆ ಈ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಹೆದರುವಂತಾಗಿದೆ. ತುಸು ಆಯ ತಪ್ಪಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಹಾಗಾಗಿ ಈ ರಸ್ತೆಯ ರಿಪೇರಿ ಮಾಡಬೇಕು ಎಂಬ ಮನೋಭಾವ ಇಲ್ಲಿಯವರೆಗೂ ನಗರಸಭೆಯವರಿಗೆ ಆಗಲಿ ಅಥವಾ ಜಿಲ್ಲಾಡಳಿತದವರಿಗೆ ಆಗಲಿ, ಬಾರದೇ ಇರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಈ ರಸ್ತೆಯ ಅಕ್ಕಪಕ್ಕದಲ್ಲಿ ಅಲ್ಮೇರಾ ಪೀಠೋಪಕರಣ, ಹೋಲ್ ಸೇಲ್ ಅಂಗಡಿಗಳಿದ್ದು, ನೂರಾರು ಜನರು ವ್ಯಾಪಾರಕ್ಕಾಗಿ ಈ ರಸ್ತೆಗಳಿಗೆ ಬರುತ್ತಾರೆ. ವ್ಯಾಪಾರಕ್ಕೆ ಬರುವ ಸ್ಥಳಗಳನ್ನು ಸೌಂದರ್ಯಗೊಳಿಸುವುದು ನಗರದ ಅಭಿವೃದ್ಧಿಗೆ, ಸಹಕಾರಿಯಾಗಿದೆ. ತಕ್ಷಣ ರಸ್ತೆ ದುರಸ್ಥಿ ಮಾಡಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಡಾ.ಎಚ್.ಕೆ.ಎಸ್.ಸ್ವಾಮಿ ಮನವಿ ಮಾಡಿದ್ದಾರೆ.