ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಚಿಕ್ಕಾಟಿ-ಹುಣಸಿನಪುರ ಸಂಪರ್ಕ ರಸ್ತೆ ಹದಗೆಟ್ಟಿದ್ದ ಬಗ್ಗೆ ಗ್ರಾಪಂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ದುರಸ್ತಿಗೆ ಮುಂದಾಗದ ಹಿನ್ನೆಲೆಯಲ್ಲಿ ರೈತರು ತಾವೇ ಚಂದಾ ಹಾಕಿ ರಸ್ತೆ ದುರಸ್ತಿಪಡಿಸಿಕೊಳ್ಳುವ ಮೂಲಕ ಜನಪ್ರತಿನಿಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ!ಚಿಕ್ಕಾಟಿ ಗ್ರಾಮದಿಂದ ಹುಣಸಿನಪುರ ಗ್ರಾಮದ ಸಂಪರ್ಕ ರಸ್ತೆಯ ಪಕ್ಕದ ಕೆರೆ ಏರಿ ಮೇಲೆ (ರಸ್ತೆ) ಸಂಪೂರ್ಣ ಹಾಳಾಗಿ, ಗುಂಡಿಗಳು ಬಿದ್ದಿತ್ತು. ಮಳೆಗಾಲದಲ್ಲಿ ಕೆಸರುಮಯವಾಗಿ ರೈತರು, ಜಾನುವಾರು, ಬೈಕ್, ಸೈಕಲ್, ಆಟೋ ಸಂಚರಿಸಲು ಸರ್ಕಸ್ ನಡೆಸಿ ತೆರಳುತ್ತಿದ್ದರು. ಈ ರಸ್ತೆಯ ಎರಡು ಬದಿಯ ರೈತರು ಜಮೀನಿಗೆ ಹೋಗಲು ಆಗುತ್ತಿರಲಿಲ್ಲ. ಈ ಬಗ್ಗೆ ಚಿಕ್ಕಾಟಿ ಗ್ರಾಪಂ ಅಧ್ಯಕ್ಷ, ಸದಸ್ಯರ ಗಮನಕ್ಕೆ ತಂದರೂ ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಸಾಗ ಹಾಕಿದ್ದರು. ಈಗ ಬೇರೆ ಮಳೆ ನಿರಂತರವಾಗಿ ಬೀಳುತ್ತಿದೆ. ಈ ರಸ್ತೆಯಲ್ಲಿ ರೈತರು ಜಮೀನಿಗೆ ಹೋಗಲು ಆಗುತ್ತಿರಲಿಲ್ಲ. ಇದನ್ನು ಮನಗಂಡ ರೈತರು ಸೇರಿ ತಾವೇ ಕೈಲಾದಷ್ಟು ಹಣ ಚಂದಾ ಹಾಕಿದರು. ಬಳಿಕ ಜೆಸಿಬಿ ಮೂಲಕ ಗ್ರ್ಯಾವೆಲ್ ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ತುಂಬಿಸಿಕೊಂಡು ಬಂದು ಹಾಳಾಗಿದ್ದ ರಸ್ತೆಗೆ ಸುರಿದು ಮಟ್ಟ ಮಾಡಿಸುವ ಕೆಲಸ ಬುಧವಾರ ನಡೆಸಿಯೇ ಬಿಟ್ಟಿದ್ದಾರೆ.
ಹಳ್ಳ, ಕೊಳ್ಳಗಳಿಂದ ಕೂಡಿದ್ದ ಜೊತೆಗೆ ಕೆಸರು ಮಯವಾಗಿದ್ದ ರಸ್ತೆಯೀಗ ಸುಂದರ ರಸ್ತೆಯಾಗಿ ಬದಲಾವಣೆಯಾಗಿದೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ರೈತರು ಚಂದಾ ಹಾಕಿ ರಸ್ತೆ ದುರಸ್ತಿ ಪಡಿಸಿಕೊಂಡಿದ್ದಾರೆ. ಇದು ಜನಪ್ರತಿನಿಧಿಗಳಿಗೆ ರೈತರು ಛೀಮಾರಿ ಹಾಕಿದಂತಾಗಿದೆ ಎಂದು ರೈತರೊಬ್ಬರು ಹೇಳಿದ್ದಾರೆ.ದುರಸ್ತಿಪಡಿಸಲು ಆಗಲ್ಲ ಅಂದ್ರು,
ರಸ್ತೆ ಫೋಟೋ ಸೆರೆ ಹಿಡಿದ ಬಿಲ್ ಕಲೆಕ್ಟರ್!ಚಿಕ್ಕಾಟಿ-ಹುಣಸಿನಪುರ ಸಂಪರ್ಕ ರಸ್ತೆ ಹಾಳಾಗಿದ್ದ ಬಗ್ಗೆ ರೈತರು ಸಮಸ್ಯೆ ಬಗೆಹರಿಸಿ ಕೊಡಿ ಎಂದು ಬೇಡಿದರೂ ನಮಗೆ ಬರಲ್ಲ ಎಂದಿತ್ತು ಗ್ರಾಪಂ! ಆದರೆ ರೈತರೇ ಸ್ವಂತ ಹಣದಲ್ಲಿ ರಸ್ತೆ ದುರಸ್ತಿಪಡಿಸುವ ಸಮಯದಲ್ಲಿ ಗ್ರಾಪಂ ಬಿಲ್ ಕಲೆಕ್ಟರ್ ರಸ್ತೆ ಫೋಟೋವನ್ನು ಮೊಬೈಲ್ ಮೂಲಕ ಸೆರೆ ಹಿಡಿಯುತ್ತಿದ್ದಾಗ ರೈತರು ದಬಾಯಿಸಿ ವಾಪಸ್ ಕಳುಹಿಸಿದ್ದಾರೆ. ಗ್ರಾಪಂ ರಸ್ತೆ ದುರಸ್ತಿ ಮಾಡಿಸಲಿಲ್ಲ. ಈಗ ರೈತರು ಚಂದಾ ಹಾಕಿ ಮಾಡಿದ ರಸ್ತೆಗೆ ಬಿಲ್ ಮಾಡಿಕೊಳ್ಳಲು ಫೋಟೋ ತೆಗೆಯಲು ಬಿಲ್ ಕಲೆಕ್ಟರ್ ಕಳುಹಿಸಿದ್ದಾರೆ ಎಂದು ಗ್ರಾಮದ ಯುವಕನೊಬ್ಬ ವ್ಯಂಗ್ಯವಾಡಿದ್ದು ಕೇಳಿಬಂತು.