ನನೆಗುದಿಗೆ ಬಿದ್ದ ಹಳೇ ಕರಮುಡಿ ರಸ್ತೆ ದುರಸ್ತಿ

| Published : May 15 2024, 01:34 AM IST

ಸಾರಾಂಶ

ರಸ್ತೆಯುದ್ದಕ್ಕೂ ಜಾಲಿ ಮುಳ್ಳು ಕಂಟಿಗಳೇ ಬೆಳೆದು ರಸ್ತೆ ಕಾಣದಂತಾಗಿದೆ.

ಶಿವಮೂರ್ತಿ ಇಟಗಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ತಾಲೂಕಿನ ಕರಮುಡಿ ಗ್ರಾಮದಿಂದ ಯಲಬುರ್ಗಾಕ್ಕೆ ಸಂಚರಿಸುವ ಮೂಲ ಹಳೇ ರಸ್ತೆ, ರೈತರ ಜಮೀನುಗಳಿಗೆ ಹೋಗುವ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ರಸ್ತೆಯುದ್ದಕ್ಕೂ ಜಾಲಿ ಮುಳ್ಳು ಕಂಟಿಗಳೇ ಬೆಳೆದು ರಸ್ತೆ ಕಾಣದಂತಾಗಿದೆ.

ಮೂಲ ಹಳೇ ರಸ್ತೆ ಅಭಿವೃದ್ದಿಯಿಲ್ಲ:ಕರಮುಡಿ ಗ್ರಾಮದಿಂದ ಯಲಬುರ್ಗಾಕ್ಕೆ ಸಂಚರಿಸಲು ಕೇವಲ ೭ ಕಿಮೀ ಇದೆ. ಯಾವುದೇ ಮರಳು, ಕಲ್ಲು, ಕಡಿ, ಡಾಂಬರನ್ನು ಈ ರಸ್ತೆ ಕಂಡಿಲ್ಲ. ರೈತರು ಎತ್ತು, ಬಂಡಿ ಹೂಡಿಕೊಂಡು ಜಮೀನುಗಳಿಗೆ ಹೋಗುತ್ತಾರೆ. ರಸ್ತೆಯ ಎರಡು ಬದಿಗಳಲ್ಲೂ ಜಾಲಿ ಮುಳ್ಳಿನ ಗಿಡಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಇದರಿಂದ ರೈತರು, ಜಾನುವಾರುಗಳು ಸಾಕಷ್ಟು ಹರಸಾಹಸ ಪಡುವಂತಾಗಿದೆ. ಇನ್ನು ಮಳೆಗಾಲದಲ್ಲಂತೂ ರೈತರು ಕೃಷಿ ಚಟುವಟಿಕೆ ಮಾಡಲು ಜಮೀನಿಗೆ ಹೋಗುವುದು ಕಷ್ಟ ಸಾಧ್ಯ. ಹೀಗಾಗಿ ಸಮರ್ಪಕ ರಸ್ತೆಯಿಲ್ಲದೆ ಜಮೀನನ್ನೇ ಮಾರಾಟ ಮಾಡುವುದಕ್ಕೆ ರೈತರು ಮುಂದಾಗಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ:

ಕರಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗೆಟ್ಟು ಹೋಗಿದ್ದು, ಹತ್ತಾರು ವರ್ಷಗಳಿಂದ ಹಿಡಿಮಣ್ಣು ಕಾಣದೇ ರಸ್ತೆ ಸಂಪೂರ್ಣ ಹಾಳಾಗಿದೆ. ಆದರೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ ಪರಿಣಾಮ ಈ ಭಾಗದ ಜನರು ಸಂಚಾರಕ್ಕೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ರಸ್ತೆ ಯಾವಾಗ ಅಭಿವೃದ್ಧಿ ಭಾಗ್ಯ ಕಾಣಲಿದೆಯೋ ಎಂದು ರೈತರು ಮತ್ತು ಕುರಿಗಾಹಿಗಳು ಸಾರ್ವಜನಿಕರು ಚುನಾಯಿತ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

೧೫ ವರ್ಷದಿಂದಲೂ ಸ್ಪಂದನೆಯಿಲ್ಲ:

ಗ್ರಾಮದಿಂದ ೫ ಕಿಮೀ ಕರಮುಡಿ ಸೀಮಾದವರೆಗೆ ಆದರೂ ನರೇಗಾ ಯೋಜನೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಮೂಲ ಹಳೇ ರಸ್ತೆ ಅಭಿವೃದ್ಧಿ ಪಡಿಸಿ ರೈತರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಗ್ರಾಮದ ಜನರು ೧೫ ವರ್ಷಗಳಿಂದಲೂ ಎಲ್ಲ ಶಾಸಕರು, ಸಚಿವರಿಗೂ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ ಎಂದು ಕರಮುಡಿ ಗ್ರಾಮದ ರೈತರಾದ ಶ್ರೀಶೈಲಪ್ಪ ಮಡಿವಾಳರ, ಪ್ರದೀಪ್ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕರಮುಡಿ ಗ್ರಾಮದಿಂದ ಯಲಬುರ್ಗಾಕ್ಕೆ ಹೋಗುವ ಮೂಲ ಹಳೇ ರಸ್ತೆ ೭ ಕಿ ಮೀ ಇದ್ದು, ಇದನ್ನು ನರೇಗಾದಡಿ ಕ್ರಿಯಾ ಯೋಜನೆಯಲ್ಲಿ ಸೇರಿಸಿ ರೈತರ ಹೊಲಗಳಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಕರಮುಡಿ ಸೀಮಾದವರೆಗೆ ರಸ್ತೆ ಅಭಿವೃದ್ಧಿ ಜೊತೆಗೆ ಇನ್ನೂ ಹೆಚ್ಚಿನ ರಸ್ತೆ ಅಭಿವೃದ್ಧಿಗಾಗಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಕರಮುಡಿ ಗ್ರಾಪಂ ಪಿಡಿಒ ಬಸವರಾಜ ಕಿಳೇಕ್ಯಾತರ ತಿಳಿಸಿದ್ದಾರೆ.