ಸಾರಾಂಶ
ತಾಲೂಕಿನ ಮುತ್ಕೂರು ವ್ಯವಸಾಯ ಸೇವಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 47.42 ಲಕ್ಷ ರು. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆ.ಮಂಜುನಾಥ್ ತಿಳಿಸಿದರು. ಹೊಸಕೋಟೆಯಲ್ಲಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸದಸ್ಯರ ವಾರ್ಷಿಕ ಸಭೆ
ಕನ್ನಡಪ್ರಭ ವಾರ್ತೆ ಹೊಸಕೋಟೆತಾಲೂಕಿನ ಮುತ್ಕೂರು ವ್ಯವಸಾಯ ಸೇವಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 47.42 ಲಕ್ಷ ರು. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆ.ಮಂಜುನಾಥ್ ತಿಳಿಸಿದರು.
ತಾಲೂಕಿನ ದೊಡ್ಡದುನ್ನಸಂದ್ರದಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ಸಂಘವು 2538 ಸದಸ್ಯರನ್ನು ಹೊಂದಿದ್ದು, ಸರಕಾರದ ನಿಯಮಗಳಿಗೆ ಅನುಸಾರವಾಗಿ ಹಾಗೂ ನಿಗದಿಪಡಿಸಿರುವ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಹಿತ ಕಾಪಾಡಲು ಶ್ರಮಿಸುತ್ತಿದೆ. 2023-24ನೇ ಸಾಲಿನಲ್ಲಿ ಒಟ್ಟು 1.57 ಕೋಟಿ ರು. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ಚಿನ್ನಾಭರಣ ಅಡಮಾನದ ಮೇಲೆ 6.71 ಕೋಟಿ ರು. ಸಾಲ ನೀಡಿದೆ. ಸದಸ್ಯರು ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಸಂಘವು ಉತ್ತಮ ಪ್ರಗತಿ ಸಾಧಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಮರಣ ಹೊಂದಿದ ೪ ಸದಸ್ಯರ ವಾರಸುದಾರರಿಗೆ ತಲಾ 10 ಸಾವಿರ ರು .ಗಳ ಪರಿಹಾರ, ಎಸ್ಸೆಸ್ಸಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ೩೫ ಮಕ್ಕಳಿಗೆ ತಲಾ 5 ಸಾವಿರ ರು.ಗಳ ಪ್ರೋತ್ಸಾಹ ಧನ ಮತ್ತು ಪ್ರಶಂಸಾ ಪತ್ರ ವಿತರಿಸಲಾಯಿತು.ಸಂಘದ ಸಿಇಒ ಆರ್.ನಾರಾಯಣಗೌಡ ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು. 2024-25ನೇ ಸಾಲಿನ ಬಜೆಟ್‌ಗೆ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು.
ಸಂಘದ ಉಪಾಧ್ಯಕ್ಷ ಎ.ಚಂದ್ರಪ್ಪ, ನಿರ್ದೇಶಕರಾದ ಎಂ.ವೆಂಕಟರಾಜು, ಡಿ.ಎಸ್.ಮಂಜುನಾಥ್, ಎಂ.ಎಸ್.ಮಂಜುನಾಥ್, ರಾಜೇಂದ್ರ, ವೈ.ಕೆ.ಮುನಿರಾಜ, ಎ.ಎನ್.ಗಜೇಂದ್ರ, ಯಶೋಧಮ್ಮ, ಸಿ.ಯಶೋಧ ಮತ್ತು ರಾಜಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಕ ಆರ್.ನಾರಾಯಣಗೌಡ ಇದ್ದರು.