ಸಾರಾಂಶ
ಬೆಂಗಳೂರು : ರಾಜಧಾನಿಯ ಬೀದಿಗಳಲ್ಲಿ ವಿದ್ಯುತ್ ದೀಪದ ಸಮಸ್ಯೆ ನಿವಾರಣೆಗೆ ಎಲ್‌ಇಡಿ ಬೀದಿ ದೀಪ ಅಳವಡಿಕೆ ಯೋಜನೆಯ ಅನುಷ್ಠಾನಕ್ಕೆ ಬಿಬಿಎಂಪಿ ತಯಾರಿ ನಡೆಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಅಧಿಕ ಬೀದಿ ದೀಪಗಳಿದ್ದು, ಈ ಸೋಡಿಯಂ ದೀಪಗಳ ಬದಲು ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಈಗಾಗಲೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಬಿಬಿಎಂಪಿಯ 8 ವಲಯಗಳ ಪೈಕಿ ಮಹದೇವಪುರ ಹೊರತುಪಡಿಸಿ ಉಳಿದ 7 ವಲಯಗಳಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ ಯೋಜನೆ ಜಾರಿಗೆ ತಯಾರಿ ಮಾಡಲಾಗಿದೆ.
ಈಗಾಗಲೇ ನಗರದ ಬೀದಿ ದೀಪಗಳ ಸರ್ವೆ ಕಾರ್ಯ ಕೈಗೊಂಡು, ಕಾರ್ಯಸಾಧ್ಯತಾ ವರದಿಯನ್ನು ಖಾಸಗಿ ಸಂಸ್ಥೆ ಸಲ್ಲಿಸಿದೆ. 7 ವಲಯಗಳನ್ನು 4 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಪೂರ್ವ, ಬೊಮ್ಮನಹಳ್ಳಿ (ಭಾಗಶಃ), ಪಶ್ಚಿಮ, ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿನಗರ ಹಾಗೂ ದಕ್ಷಿಣ ವಲಯದಲ್ಲಿನ ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ಇಂಧನ ಉಳಿತಾಯ-ಇಎಂಐ, ವಾರ್ಷಿಕ ಪಾವತಿ ಮಾದರಿ ಯೋಜನೆಯಡಿಯಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಿ, ನಿರ್ವಹಿಸುವ ಹಾಗೂ ಈ ಯೋಜನೆ ಅನುಷ್ಠಾನಕ್ಕೆ ಅಲ್ಪಾವಧಿ ಟೆಂಡರ್ ಕರೆಯಲು ಅನುಮೋದನೆ ಕೋರಿ ಪಾಲಿಕೆಯು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಎಲ್‌ಇಡಿ ದೀಪ ಅಳವಡಿಕೆ ಜತೆಗೆ ಏಳು ವರ್ಷ ನಿರ್ವಹಣೆ ಜವಾಬ್ದಾರಿಯನ್ನು ಗುತ್ತಿಗೆ ಪಡೆಯುವ ಸಂಸ್ಥೆ ನಿರ್ವಹಿಸಬೇಕಾಗಲಿದೆ. ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ ಪಾಲಿಕೆಗೆ ವಾರ್ಷಿಕ ನೂರಾರು ಕೋಟಿ ರುಪಾಯಿ ವಿದ್ಯುತ್ ಬಿಲ್ ಉಳಿಸಬಹುದಾಗಿದೆ. ಪಾಲಿಕೆಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಪಾಲಿಕೆ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್ ಹೇಳಿದ್ದಾರೆ.
ಬಿಬಿಎಂಪಿಯು ಸದ್ಯ ಬೀದಿ ದೀಪಗಳಿಗೆ ಬಳಸುತ್ತಿರುವ ವಿದ್ಯುತ್‌ಗೆ ವಾರ್ಷಿಕ ₹300 ಕೋಟಿ ಶುಲ್ಕವನ್ನು ಬೆಸ್ಕಾಂಗೆ ಪಾವತಿ ಮಾಡುತ್ತಿದೆ. ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಎಲ್‌ಇಡಿ ದೀಪಗಳ ಅಳವಡಿಕೆ ಮತ್ತು ನಿರ್ವಹಣೆಗೆ ವರ್ಷಕ್ಕೆ ₹95.59 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.