ಸಾರಾಂಶ
-ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾಹಿತಿ
-----ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದಲ್ಲಿ ಮಾನವ ಅಭಿವೃದ್ಧಿ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು ವಿವಿಧ ಹಂತಗಳ ಪ್ರಕ್ರಿಯೆ ಮುಗಿಸಿದ ನಂತರ ಡಿಸೆಂಬರ್ 15 ರೊಳಗೆ ಯೋಜನಾ ಆಯೋಗದಿಂದ ಸರ್ಕಾರಕ್ಕೆ ದೂರದೃಷ್ಟಿ ಯೋಜನೆ-2031ಕ್ಕೆ ಅನುಗುಣವಾಗಿ ವರದಿ ಸಲ್ಲಿಸಲಾಗುವುದೆಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು.ಮಂಗಳವಾರ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಮೊದಲನೇ ಹಂತವಾಗಿ ಇದೇ ಮಾಹೆಯಲ್ಲಿ ಇಲಾಖಾವಾರು ಮಾಹಿತಿ ಸಂಗ್ರಹಣೆ ಮತ್ತು ವಾಸ್ತವ ಸ್ಥಿತಿಯ ವಿಶ್ಲೇಷಣೆ ಮಾಡುವುದು ಅಗತ್ಯವಾಗಿದೆ ಎಂದರು.
ನಂತರ ಎರಡನೇ ಹಂತದಲ್ಲಿ 15ನೇ ಆಗಸ್ಟ್ ರೊಳಗಾಗಿ ಗ್ರಾಮೀಣ ಮತ್ತು ನಗರ ಭಾಗದಲ್ಲಿ ವಾರ್ಡ್ ಮತ್ತು ಗ್ರಾಮವಾರು ಸಭೆ, 3ನೇ ಮತ್ತು 4ನೇ ಹಂತದಲ್ಲಿ ಕ್ರಮವಾಗಿ ಗ್ರಾ.ಪಂ ಸಭೆ ಮತ್ತು ತಾ.ಪಂ ಪೌರ ಸಂಸ್ಥೆಗಳ ಸಭೆ ಸೆಪ್ಟೆಂಬರ್ 15ರೊಳಗೆ ಹಾಗೂ 5ನೇ ಹಂತದಲ್ಲಿ ತಾಲೂಕಾ ಯೋಜನಾ ಮತ್ತು ಅಭಿವೃದ್ಧಿ ಸಮಿತಿ ನಡೆಸಿ ತಾಲೂಕಿನ ಸಮಗ್ರ ವರದಿ ಸಿದ್ಧಪಡಿಸಬೇಕು. ಸೆಪ್ಟೆಂಬರ್ 30ರೊಳಗೆ 6ನೇ ಹಂತದಲ್ಲಿ ಜಿಪಂ ಸಭೆ, 7ನೇ ಹಂತವಾಗಿ ಅಕ್ಟೋಬರ್ 10 ರೊಳಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಕರೆಯಬೇಕು. ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು 20ನೇ ಅಕ್ಟೋಬರ್ ದೊಳಗೆ, ಕೊನೆಯದಾಗಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ನ.30ರೊಳಗೆ ಸಭೆ ನಡೆಸಿ ಅಂತಿವಾಗಿ ಡಿ.15ಕ್ಕೆ ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಳ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ವಿವಿಧ ಹಂತಗಳ ಕುರಿತು ಮಾಹಿತಿ ನೀಡಿದರು.ಇಲಾಖೆಗಳ ಅಧಿಕಾರಿಗಳು ತಮ್ಮ ಹಂತದಲ್ಲಿನ ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟ ಸಮಿತಿಗಳಿಗೆ ಸಲ್ಲಿಸಬೇಕು. ಈ ಪ್ರಕ್ರಿಯೆ ತ್ವರಿತವಾಗಿ ಅಂದುಕೊಂಡಂತೆ ಡಿಸೆಂಬರ್ ಒಳಗೆ ಸರ್ಕಾರಕ್ಕೆ ಪಂಚ ವಾರ್ಷಿಕ ಯೋಜನೆಯ ವರದಿ ಸಲ್ಲಿಸಿದಲ್ಲಿ ಮುಂದಿನ ಆಯವ್ಯಯದಲ್ಲಿ ಯೋಜನೆ ರೂಪಿಸಲು ಸಹಾಯವಾಗಲಿದೆ. ಈ ಕುರಿತು ಸಿ.ಎಂ ಅವರು ಕಾಲಮಿತಿಯಲ್ಲಿಯೇ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ ಎಂದರು.
ಶಾಲಾ ನಿರ್ವಹಣೆ: ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ವಿಚಿಧ ಕ್ಷೇತ್ರದಲ್ಲಿ ಮೂಲಸೌಕರ್ಯ ಬಲವರ್ಧನೆ ಬಂಡವಾಳ ಹಾಕಲಾಗುತ್ತಿದೆ, ಆದರೆ, ಸರ್ಕಾರಿ ಸಂಸ್ಥೆಗಳ ನೌಕರರಿಗೆ ಸಂಬಳ, ನಿರ್ವಹಣೆ ವ್ಯವಸ್ಥೆ ಮಂಡಳಿಯಿಂದ ಕಷ್ಟಸಾಧ್ಯ. ಶಾಲೆಗಳಿಗೆ ವಿದ್ಯುತ್, ಶೌಚಾಲಯ, ಸ್ವಚ್ಚತೆಗೆ ವಾರ್ಷಿಕ ನೀಡುವ 5-10 ಸಾವಿರ ಸಾಕಾಗುತ್ತಿಲ್ಲ. ಶಿಕ್ಷಣ ಇಲಾಖೆ ಶಾಲೆಗಳ ನಿರ್ವಹಣೆಗೆ ಅನುದಾನ ನೀಡಬೇಕು ಎಂದು ಕೆ.ಕೆ.ಆರ್.ಡಿ.ಬಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಹೇಳಿದರು.ಸುಸ್ಥಿರ ಅಭಿವೃದ್ಧಿ ಯೋಜನೆ ಕುರಿತು ಯೋಜನಾ ಇಲಾಖೆಯ ಹಿರಿಯ ನಿರ್ದೇಶಕ ಬಸವರಾಜ, ವಿಕೇಂದ್ರಿಕೃತ ಯೋಜನೆ ಕುರಿತು ಡಾ.ಜಿ.ಎಸ್. ಗಣೇಶ ಪ್ರಸಾದ, ಸರ್ಕಾರಕ್ಕೆ ಸಂಬಂಧಿಸಿದ ಮೂಲಸೌಕರ್ಯ ಅಭಾವ ಕುರಿತು ಅಜೀಂ ಪ್ರೇಮಜಿ ಫೌಂಡೇಶನ್ ಸಂಸ್ಥೆಯ ಮೀರಜ್ ಅವರು ಪ್ರಾತ್ಯಕ್ಷಿಕೆ ಮೂಲಕ ವಿಷಯವನ್ನು ಮಂಡಿಸಿದರು.
ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಡಾ. ಗಿರೀಶ ಡಿ. ಬದೋಲೆ, ಲವೀಶ್ ಒರಡಿಯಾ, ವರ್ನಿತ್ ನೇಗಿ, ಎಂ.ಡಿ.ಹ್ಯಾರಿಸ್ ಸುಮೈರ್ ಏಳು ಜಿಲ್ಲೆಗಳ ಜಿಪಂ ಸಿಪಿಒ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಆರೋಗ್ಯ, ಪಂ.ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಸಮಾಜ ಕಲ್ಯಾಣ, ಹಿಂ.ವ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿ.ಯು.ಡಿ.ಸಿ ಯೋಜನಾ ನಿರ್ದೇಶಕರು ಇದ್ದರು.ಫೋಟೋ- ಬಿಆರ್ ಪಾಟೀಲ್ 1 ಮತ್ತು ಬಿಆರ್ ಪಾಟೀಲ್ 2
ಕಲಬುರಿ ಡಿಸಿ ಕಚೇರಿ ಸಭಾಂಗಣದಲ್ಲಿ ಯೋಜನಾ ಆಯೋಗದ ಉಪಾಧ್ಯ?ಕ್ಷ ಬಿಆರ್ ಪಾಟೀಲ್ ಸಭೆ ನಡೆಸಿದರು.