ವರದಿಗಾರರ ಕೂಟ, ಪತ್ರಕರ್ತರಿಗೆ ನಿವೇಶನ: ಪ್ರಭಾಕರ್

| Published : Sep 14 2025, 01:04 AM IST

ಸಾರಾಂಶ

ಜಿಲ್ಲಾ ವರದಿಗಾರರ ಕೂಟಕ್ಕೆ ಜಾಗ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಭರವಸೆ ನೀಡಿದ್ದಾರೆ.

- ದಾವಣಗೆರೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೊಂದಿಗೆ ಸಂವಾದ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಜಾಗ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಭರವಸೆ ನೀಡಿದರು.

ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದರೆ ಕ್ಯಾಬಿನೆಟ್‌ನಲ್ಲಿಟ್ಟು ವರದಿಗಾರರ ಕೂಟಕ್ಕೆ ಜಾಗ ಮಂಜೂರು ಮಾಡಲಾಗುವುದು. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಶಾಸಕರು, ವಿಧಾನ ಪರಿಷತ್ತು ಸದಸ್ಯರು ಹಾಗೂ ಸಂಸದರ ನಿಧಿಯಿಂದಲೂ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

ಕರ್ನಾಟಕ ಗೃಹ ಮಂಡಳಿಯಲ್ಲಿ ಸುಮಾರು 6 ಸಾವಿರ ನಿವೇಶನಗಳು ಹಂಚಿಕೆಯಾಗದೇ ಹಾಗೇ ಉಳಿದಿವೆ. ಪತ್ರಕರ್ತರಿಗೆ ಗೃಹ ಮಂಡಳಿಯಿಂದ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸುವ ಚಿಂತನೆ ಇದೆ. ವಸತಿ ಸಚಿವ ಜಮೀರ್ ಅಹಮದ್ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಇದು ಕಾರ್ಯರೂಪಕ್ಕೆ ಬರುವಂತೆ ಪ್ರಯತ್ನಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಪರವಾಗಿದ್ದು, ಮಾಧ್ಯಮದವರ ಯಾವುದೇ ಬೇಡಿಕೆಗಳಿಗೆ ಇಲ್ಲ ಅನ್ನುವವರಲ್ಲ ಎಂದು ತಿಳಿಸಿದರು.

ಆರೋಗ್ಯ ಸಂಜೀವಿನಿ ಯೋಜನೆಯಡಿ ಪತ್ರಕರ್ತರು ಖಾಸಗಿ ಆಸ್ಪತ್ರೆಗಳಲ್ಲಿ ₹10 ಲಕ್ಷವರೆಗೆ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಬಜೆಟ್‌ನಲ್ಲಿ ಸರ್ಕಾರ ಇದಕ್ಕಾಗಿ ₹6.5 ಕೋಟಿ ಮೀಸಲಿಟ್ಟಿದೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು. ಆದರೆ, ಮಾಧ್ಯಮ ಮಾನ್ಯತಾ ಪತ್ರ ಹೊಂದಿರುವವರು ಮಾತ್ರ ಇದಕ್ಕೆ ಒಳಪಡುತ್ತಾರೆ. ಅರ್ಹ ಪತ್ರಕರ್ತರೆಲ್ಲರಿಗೂ ಸೌಲಭ್ಯ ಸಿಗುವಂತೆ ಸರ್ಕಾರ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಪ್ರಭಾಕರ್‌ ಹೇಳಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿ ಸ್ಥಾಪನೆಯಾದ ವರದಿಗಾರರ ಕೂಟ 18 ವರ್ಷಗಳಿಂದ ಸ್ವಂತ ಜಾಗವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೊದಲನೇ ಮಹಡಿಗೆ ಮೆಟ್ಟಿಲು ಹತ್ತಿ ಬರಬೇಕಿರುವುದರಿಂದ ಅಂಗವಿಕಲರಿಗೆ, ವಯೋವೃದ್ಧರಿಗೆ ತೊಂದರೆಯಾಗಿದೆ. ಊರಿನ ಹೊರಗೆ ಸಿಎ ಸೈಟ್ ನೀಡಿದರೆ ಪ್ರಯೋಜನವಿಲ್ಲ. ಈಗಾಗಲೇ ಡಿಡಿಪಿಐ ಕಚೇರಿ ಬಳಿ ಪಾಲಿಕೆಗೆ ಸೇರಿದ ಒಂದು ಜಾಗ ನೋಡಿದ್ದು, ಅದನ್ನು ಕೊಡಿಸಿದರೆ ಉತ್ತಮ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಅಲ್ಲಿಂದ 1 ಕಿ.ಮೀ ವ್ಯಾಪ್ತಿಯಲ್ಲಿದ್ದು, ನಗರದ ಮಧ್ಯಭಾಗದಲ್ಲಿ ಇರುವುದರಿಂದ ಜನರಿಗೂ ಅನುಕೂಲವಾಗಲಿದೆ ಎಂದರು.

ಪತ್ರಕರ್ತರಲ್ಲಿ ಎಲ್ಲರೂ ಸ್ಥಿತಿವಂತರಿಲ್ಲ. ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರೂ ಇದ್ದಾರೆ. ಹೊಟ್ಟೆ-ಬಟ್ಟೆಗೆ ಏನೋ ದಾರಿ ಮಾಡಿಕೊಳ್ಳುತ್ತಾರೆ. ಆದರೆ, ಜೀವನದಲ್ಲಿ ಒಂದು ಸ್ವಂತ ಸೂರು ಹೊಂದಬೇಕೆಂಬ ಕನಸು ಇರುತ್ತದೆ. ವರದಿಗಾರರ ಕೂಟಕ್ಕೆ ಜಾಗ ಸಿಗಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನಿವೇಶನ ನೀಡಬೇಕು. ಪತ್ರಕರ್ತರ ನೋವು-ನಲಿವುಗಳನ್ನು ಸ್ವತಃ ಅನುಭವಿಸಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಸೆಪ್ಟಂಬರ್ ಅಂತ್ಯದೊಳಗೆ ವರದಿಗಾರರ ಕೂಟದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವಂತೆ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಹಿರಿಯ ಪತ್ರಕರ್ತರಾದ ಮಂಜುನಾಥ ಗೌರಕ್ಕಳವರ್, ಮಲ್ಲಿಕಾರ್ಜುನ ಕಬ್ಬೂರು ಸೇರಿದಂತೆ ಕೂಟದ ಪದಾಧಿಕಾರಿಗಳು, ಮಾಧ್ಯಮದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

- - -

(ಬಾಕ್ಸ್‌) * ನಿಯಮ ಸರಳಗೊಂಡರೆ 6 ಸಾವಿರ ಪತ್ರಕರ್ತರಿಗೆ ಬಸ್ ಪಾಸ್ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ₹3 ಸಾವಿರ ಇದ್ದ ಪತ್ರಕರ್ತರ ಪಿಂಚಣಿಯನ್ನು ₹15 ಸಾವಿರದವರಗೆ ಹೆಚ್ಚಿಸಿತು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕು ಎನ್ನುವಷ್ಟರಲ್ಲಿ ಸರ್ಕಾರ ಬದಲಾಗಿದ್ದರಿಂದ ಆ ವಿಚಾರ ನನೆಗುದಿಗೆ ಬಿದ್ದಿತು ಎಂದು ಕೆ.ವಿ. ಪ್ರಭಾಕರ್‌ ಹೇಳಿದರು.

ಈ ಬಾರಿ ಎರಡನೇ ಅವಧಿಗೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸಲಾಗಿದೆ. ಆದರೆ, ಕಠಿಣ ನಿಯಮಗಳ ಕಾರಣ ರಾಜ್ಯದಲ್ಲಿ 62 ಜನ ಮಾತ್ರ ಬಸ್ ಪಾಸ್ ಪಡೆದಿದ್ದಾರೆ. ಸ್ಯಾಲರಿ ಸರ್ಟಿಫಿಕೇಟ್ ಕೇಳಿರುವುದರಿಂದ ಲೈನೇಜ್‌ಗೆ ದುಡಿಯುವ ಪತ್ರಕರ್ತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಂತ ಹಂತವಾಗಿ ನಿಯಮ ಸರಳೀಕರಣ ಮಾಡಲಾಗುವುದು. ಇದರಿಂದ ಸುಮಾರು 6 ಸಾವಿರ ಪತ್ರಕರ್ತರಿಗೆ ಬಸ್ ಪಾಸ್ ಸಿಗಲಿದೆ ಎಂದರು.

- - -

-13ಕೆಡಿವಿಜಿ37:

ದಾವಣಗೆರೆಯಲ್ಲಿ ಜಿಲ್ಲಾ ವರದಿಗಾರರ ಕೂಟದಿಂದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಸನ್ಮಾನಿಸಲಾಯಿತು.