ಸಂವಿಧಾನ ಪಾಲಿಸುವುದರ ಜತೆಗೆ ಅಭಿವೃದ್ಧಿ ಸಾಧಿಸೋಣ

| Published : Jan 27 2024, 01:15 AM IST

ಸಾರಾಂಶ

ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಅಭಿವೃಕ್ತಿ ಸ್ವಾತಂತ್ರ್ಯ ಸಮಾನ ಸ್ಥಾನಮಾನ ದೊರಕಿಸಿ ಕೊಡುವ ವ್ಯವಸ್ಥೆಯನ್ನು ಈ ದೇಶದ ಸಂವಿಧಾನ ಒದಗಿಸಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿದ ಸಂವಿಧಾನದ ಪಾಲಿಸುವುದರ ಜತೆಗೆ ಶಾಂತಿಯುತ ಬದುಕು ಕಟ್ಟಿಕೊಂಡು, ದೇಶದ ಅಭಿವೃದ್ದಿ ಸಾಧಿಸೋಣ ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಹೇಳಿದರು.

ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣನ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ತಾಲೂಕಾಡಳಿತ ಆಶ್ರಯದಲ್ಲಿ ನಡೆದ 75 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಅಭಿವೃಕ್ತಿ ಸ್ವಾತಂತ್ರ್ಯ ಸಮಾನ ಸ್ಥಾನಮಾನ ದೊರಕಿಸಿ ಕೊಡುವ ವ್ಯವಸ್ಥೆಯನ್ನು ಈ ದೇಶದ ಸಂವಿಧಾನ ಒದಗಿಸಿದೆ. ಈ ದೇಶದ ಸಾರ್ವಭೌಮತ್ವದಲ್ಲಿ ಆತ್ಮ ಗೌರವ, ಸ್ವಾಭಿಮಾನ ವ್ಯಕ್ತಿತ್ವ ರೂಪಿಸಿಕೊಂಡು ಶೋಷಣೆಗೆ ದಬ್ಬಾಳಿಕೆಗೆ ಒಳಗಾಗುವ ನಮ್ಮ ಪೂರ್ವ ಜನ್ಮದ ಕರ್ಮದ ಫಲ ಎಂಬ ಭಾವನೆ ದೂರಮಾಡಿ ಪ್ರತಿಯೊಬ್ಬ ಪ್ರಜೆಯು ಸಂವಿಧಾನವನ್ನು ಅರಿತುಕೊಂಡು ಬಾಳಿದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ ರಚಿಸಿದ ಸಂವಿಧಾನ ನಮ್ಮ ನ್ಯಾಯಯುತ ಬದುಕಿಗೆ ಆಧಾರವಾಗಿದೆ. ಯುವಕರು ಹೆಚ್ಚೆಚ್ಚು ದೇಶ ಪ್ರೇಮ ಮೈಗೂಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದರು. ತಹಶೀಲ್ದಾರ ಸಚ್ಚಿದಾನಂದ ಕುಚನೂರ, ಗ್ರೇಡ್-2 ತಹಶಿಲ್ದಾರ ಜೆ .ಸಿ. ಅಷ್ಟಗಿಮಠ, ಡಿವೈಎಸ್ಪಿ ರವಿ ನಾಯ್ಕ, ಪಿಐ ಪಂಚಾಕ್ಷರಿ ಸಾಲಿಮಠ, ತಾಪಂ ಇಒ ಸುಭಾಸ ಸಂಪಗಾಂವಿ, ಬಿಇಒ ಎ.ಎನ್. ಪ್ಯಾಟಿ, ತಾಲೂಕು ಆರೋಗ್ಯ ಅಧಿಕಾರಿ ಡಾ ಎಸ್.ಎಸ್. ಸಿದ್ದನ್ನವರ, ಮುರಳಿದರ ಮಾಳೋದೆ, ಮಾತಾಡೆ ಹಾಗೂ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು ಇದ್ದರು. ಪಿಎಸ್‍ಐ ಗುರುರಾಜ ಕಲಬುರ್ಗಿ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಬಸವರಾಜ ಭರಮನ್ನವರ ನಿರೂಪಿಸಿ, ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.