ಸಾರಾಂಶ
ಲಕ್ಷ್ಮೇಶ್ವರ: ಭಾರತವು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ 75 ವರ್ಷ ಕಳೆದು ಅಭಿವೃದ್ಧಿ ಪೂರ್ವದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.
ಭಾನುವಾರ ಪಟ್ಟಣದ ಉಮಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನಮ್ಮ ದೇಶವು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಗಣತಂತ್ರ ವ್ಯವಸ್ಥೆಯಲ್ಲಿ ಸುಮಾರು 75ವರ್ಷಗಳ ಕಾಲ ಸಾಗಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ನಿಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಮಹನೀಯರು ತ್ಯಾಗ ಬಲಿದಾನ ಸ್ಮರಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸಂವಿಧಾನದಡಿಯಲ್ಲಿ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಜಾತಿ, ಧರ್ಮ,ವರ್ಣ ವ್ಯವಸ್ಥೆ ಧಿಕ್ಕರಿಸಿ ಎಲ್ಲರೂ ಸಮಾನರು ಎಂಬ ಸಿದ್ಧಾಂತ ಅಳವಡಿಸಿಕೊಂಡು ಉತ್ತಮ ಗಣರಾಜ್ಯವಾಗಿ ಭಾರತ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಯುವ ಪೀಳಿಗೆ ನಮ್ಮ ದೇಶದ ಪ್ರಗತಿಯಲ್ಲಿ ತಮ್ಮ ಕೊಡುಗೆ ನೀಡುವ ಮೂಲಕ ಭಾರತದ ಅಭಿವೃದ್ಧಿಗೆ ನೆರವಾಗಲಿ ಎಂದು ಹೇಳಿದರು.
ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಂಭು ಬಳಿಗಾರ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆ ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಎಂದು ಹೇಳಿದರು.ತಾಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ಗಣರಾಜ್ಯೋತ್ಸವದ ಆಚರಣೆಯ ಮಹತ್ವ ತಿಳಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಅಮಾಸಿ, ಉಪ ನೋಂದಣಾಧಿಕಾರಿ ಎಸ್.ಕೆ. ಜಲರೆಡ್ಡಿ, ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ಪಿಎಸ್ಐ ನಾಗರಾಜ ಗಡದ, ಖ್ಯಾತ ಕುಸ್ತಿಪಟು ಜಯಶ್ರೀ ಗುಡಗುಂಟಿ, ಆಂಜನೆಯಪ್ಪ, ಮಹೇಶ ಹೊಗೆಸೊಪ್ಪಿನ, ಕೆ.ಟಿ. ರಾಠೋಡ, ಶಿವಾನಂದ ಬಾವಿ ಸೇರಿದಂತೆ ಪುರಸಭೆಯ ಸದಸ್ಯರು ಹಾಗೂ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.ತಹಸೀಲ್ದಾರ್ ವಾಸುದೇವ ಸ್ವಾಮಿ ಪಥ ಸಂಚಲನ ವೀಕ್ಷಿಸಿದರು. ಸಮಾರಂಭದ ನಂತರ ವೇಷಭೂಷಣ ಸ್ಪರ್ಧೆ, ದೇಶ ಭಕ್ತಿ ಗೀತೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.
ಸಮಾರಂಭದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ನೀಡಿದವು. ಸಭೆಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಚಂದ್ರಶೇಖರ ನರಸಮ್ಮನವರ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಎಂ.ಎ.ನದಾಫ್ ವಂದಿಸಿದರು.