ಶಿಸ್ತು ಸಂಯಮ ಮತ್ತು ರಾಷ್ಟ್ರ ಭಕ್ತಿಯೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ತಾನ್ಯ, ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ಷ ಪೆರೇಡ್ ಮೈದಾನದಲ್ಲಿ ಸೋಮವಾರ ಜರುಗಿದ 77ನೇ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಗೌರವ ರಕ್ಷೆ ನೀಡಲು ರಾಜ್ಯ ಎನ್ ಎಸ್ ಎಸ್ ತಂಡಕ್ಕೆ ಆಯ್ಕೆಯಾಗಿದ್ದ ಸೋಮವಾರಪೇಟೆಯ ಹಾಗೂ ಶಿವಮೊಗ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತಾನ್ಯ ಮುರಳೀಧರ್ ಅವರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ಅವರಿದ್ದ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಈ ಪೆರೇಡ್ ನಲ್ಲಿ ಶಿಸ್ತು ಸಂಯಮ ಮತ್ತು ರಾಷ್ಟ್ರ ಭಕ್ತಿಯೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ತಾನ್ಯ, ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎರಡು ತಿಂಗಳ ಹಿಂದೆ ಪಾಲಕ್ಕಾಡ್ ನಲ್ಲಿ ಜರುಗಿದ ದಕ್ಷಿಣ ವಲಯ ಆರ್ ಡಿ ಕ್ಯಾಂಪ್ ನಲ್ಲಿಯೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ್ದರು.

ಅಖಂಡ ಭಾರತ ಸನಾತನ ಸಂತ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರು, ಅರಸಿನಕುಪ್ಪೆ ಶ್ರೀಮಂಜುನಾಥ ಸ್ವಾಮಿಯ ದೇವಾಲಯ ಗುರುಗಳಾದ ರಾಜೇಶ್ ನಾಥ್ ಗುರೂಜಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಗಮನಾರ್ಹ ಸಾಧನೆ ಮಾಡಿರುವ ತಾನ್ಯ, ಪ್ರಸ್ತುತ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯಲ್ಲಿ ಎರಡನೇ ವರ್ಷದ ಬಿಎಸ್ಸಿ ಅರಣ್ಯಶಾಸ್ತ್ರವನ್ನು ಅಭ್ಯಸಿಸುತ್ತಿದ್ದಾರೆ.

ಸೋಮವಾರಪೇಟೆಯ ಹಿರಿಯ ಪತ್ರಕರ್ತರಾದ ಮುರಳೀಧರ್ ಹಾಗೂ ಸರಿತಾ ದಂಪತಿ ಪುತ್ರಿಯಾಗಿರುವ ಇವರಿಗೆ ಹಲವು ಸಂಘ ಸಂಸ್ಥೆಗಳು, ಶಿಕ್ಷಕ ವಲಯ ಹಾಗೂ ಸಾರ್ವಜನಿಕರು ಪ್ರಶಂಸಿಸಿದ್ದಾರೆ.