ಪ್ರಜೆಗಳೇ ಪ್ರಭುಗಳಾದ ದಿನವೇ ಗಣರಾಜ್ಯ: ನೋಪಿ ಶಂಕರ್

| Published : Jan 27 2025, 12:46 AM IST

ಸಾರಾಂಶ

ಪ್ರಜೆಗಳೇ ಪ್ರಭುಗಳಾದ ದಿನ ಗಣರಾಜ್ಯವಾಗಿದೆ. ದೇಶದಲ್ಲಿ ಅಂಬೇಡ್ಕರ್ ನೇತೃತ್ವದ ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಎಲ್. ನೋಪಿ ಶಂಕರ್ ಹೇಳಿದರು.

ರಾಷ್ಟ್ರ ನಾಯಕರ ಬಗ್ಗೆ ಘೋಷಣೆ, ಮೆರವಣಿಗೆ

ಕನ್ನಡಪ್ರಭ ವಾರ್ತೆ ಸೊರಬ

ಪ್ರಜೆಗಳೇ ಪ್ರಭುಗಳಾದ ದಿನ ಗಣರಾಜ್ಯವಾಗಿದೆ. ದೇಶದಲ್ಲಿ ಅಂಬೇಡ್ಕರ್ ನೇತೃತ್ವದ ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಎಲ್. ನೋಪಿ ಶಂಕರ್ ಹೇಳಿದರು.

ತಾಲೂಕಿನ ಕುಂದಗಸವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂವಿಧಾನ ರಚನಾ ಸಮಿತಿಯಲ್ಲಿದ್ದ ನಾಯಕರು ಸಂವಿಧಾನ ಎಂಬ ಪೌಷ್ಟಿಕಾಂಶದಿಂದ ಭಾರತದ ಅಭಿವೃದ್ಧಿ ಎಂಬ ಮಗು ಮುಂದೆ ಸಮಗ್ರ ಏಳಿಗೆಯತ್ತ ಹೆಜ್ಜೆ ಹಾಕುತ್ತದೆ ಎಂಬ ಕಲ್ಪನೆಯಲ್ಲಿದ್ದರು. ಆ ನಿಟ್ಟಿನಲ್ಲಿ ದೇಶ ಅಭಿವೃದ್ಧಿಯಾಗಿದೆಯೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದ ಅವರು, ಸ್ವಾತಂತ್ರ್ಯ ಬಂದ ನಂತರ ಪಂಚವಾರ್ಷಿಕ ಯೋಜನೆಗಳು ದೇಶದ ಅಭಿವೃದ್ದಿಗೆ ಸಹಕಾರ ಆಗಿದೆ. ಈ ಮೂಲಕ ಶಿಕ್ಷಣ, ಕೃಷಿ, ವೈಜ್ಞಾನಿಕ, ಕೈಗಾರಿಕಾ ಕ್ಷೇತ್ರಗಳು ಅಭಿವೃದ್ಧಿ ಹೊಂದಿದವು. ಎಲ್ಲಾ ಧಾರ್ಮಿಕ ಹಬ್ಬಗಳಂತೆ ರಾಷ್ಟ್ರೀಯ ಹಬ್ಬಗಳು ಎಲ್ಲರ ಮನೆ-ಮನಗಳಲ್ಲಿ ಆಚರಿಸುವಂತಾಗಲಿ ಎಂದು ಆಶಿಸಿದರು.

ಕುಂದಗಸವಿ ಗ್ರಾಮ ಸೇವಾ ಸಮಿತಿ ಅಧ್ಯಕ್ಷ ಬೆನಕಪ್ಪ ಮಾತನಾಡಿ, ಇಂದಿನ ಮಕ್ಕಳು ಭ್ರಾತೃತ್ವ ಭಾವನೆಯನ್ನು ಹೊಂದಿ ಸಾಮರಸ್ಯ ಭಾವನೆಯಿಂದ ಸಮಾಜ ಮತ್ತು ದೇಶವನ್ನು ಮುನ್ನಡೆಸುವಂತವರಾಗಬೇಕು ಎಂದರು.

ಇದಕ್ಕೂ ಮೊದಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ನೋಪಿ ಶಂಕರ ಎಂಎಲ್ ದ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರ ನಾಯಕರ ಘೋಷಣೆ ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ವಿದ್ಯಾರ್ಥಿಗಳಿಗೆ ಸ್ಮರಣಿಕೆ ವಿತರಿಸಲಾಯಿತು.

ಗ್ರಾಮ ಪಂಚಾಯತಿ ಸದಸ್ಯರಾದ ಪ್ರೇಮ, ಡಾಕಪ್ಪ, ಶಾಂತಪ್ಪ, ಕುಮಾರಸ್ವಾಮಿ, ಗ್ರಾಮದ ಹಿರಿಯರಾದ ಲಕ್ಕಪ್ಪ, ಸಿದ್ದಪ್ಪಗೌಡ, ಶಿಕ್ಷಕ ಅಶೋಕ್, ಶೃತಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಓಂಕಾರಮ್ಮ, ಲತಮ್ಮ, ಮಹೇಶ್, ಸಂತೋಷ್, ಸುರೇಶ್, ಧರಣಿಂದ್ರಪ್ಪ ಇದ್ದರು.