ಸಾರಾಂಶ
- ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯಿಂದ ಹೆಚ್ಚಿನ ಅನುಕೂಲ- - - ದಾವಣಗೆರೆ: ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿ ಶೀಘ್ರ ಮುಗಿಸಬೇಕೆಂದು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ದಾವಣಗೆರೆ ಜಿಲ್ಲಾ ನೈರುತ್ಯ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಪತ್ರ ಬರೆದು ಮನವಿ ಮಾಡಿದ್ದಾರೆ.
ಸದರಿ ಹೊಸ ರೈಲು ಮಾರ್ಗವು ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ ಮತ್ತು ವಿಜಯಪುರ ಅಂತರವನ್ನು 65 ಕಿ.ಮೀ.ನಷ್ಟು ಕಡಿಮೆ ಮಾಡುತ್ತದೆ. ಈ ಮಾರ್ಗದ ಅಂತಿಮ ಸಮೀಕ್ಷೆ ಮುಗಿದಿದೆ ಎಂದಿದ್ದಾರೆ.ಈ ಯೋಜನೆ ಸಾಕಾರವಾದಲ್ಲಿ ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗ ಶುರುವಾದಲ್ಲಿ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 110 ಕಿ.ಮೀ. ಅಂತರ ಕಡಿಮೆಯಾಗುತ್ತದೆ. ಸಿರಾ ಮತ್ತು ಹಿರಿಯೂರು ಹೊಸ ಸ್ಥಳಗಳು ರೈಲು ಸಂಪರ್ಕ ಪಡೆಯುತ್ತವೆ. ಬೆಂಗಳೂರು- ಅರಸಿಕೆರೆ- ಶಿವಮೊಗ್ಗ ಸಾಲಿನಲ್ಲಿ ರೈಲು ಸಂಚಾರ ಶೇ.50 ರಷ್ಟು ಕಡಿಮೆಯಾಗುತ್ತದೆ. ಶಿವಮೊಗ್ಗವು ಬೆಂಗಳೂರಿನಿಂದ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಬಹುದು. ಬೆಂಗಳೂರಿನಿಂದ, ಬೆಳಗಾವಿ ಮತ್ತು ಬಿಜಾಪುರ ನಡುವಿನ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸಂಚಾರ ಕನಿಷ್ಠ ಶೇ.35 ಕಡಿಮೆಯಾಗುತ್ತದೆ. ಪರಿಣಾಮವಾಗಿ ಪ್ರಸ್ತುತ ಹರಿಹರ-ಬೀರೂರು- ಅರಸಿಕೆರೆ ಸಾಲಿನಲ್ಲಿ ದಟ್ಟಣೆ ಕಡಿಮೆ ಆಗುವುದರಿಂದ ಹೆಚ್ಚಿನ ಸರಕು ಸಾಗಣೆ ಮಾಡಬಹುದು. ಪ್ರಯಾಣ ವೆಚ್ಚ, ಇಂಧನ ಮತ್ತು ಸಮಯವನ್ನೂ ಉಳಿಸಬಹುದು ಎಂದಿದ್ದಾರೆ.
ನೂತನ ಮಾರ್ಗದಿಂದ ಚಿತ್ರದುರ್ಗ ಜಿಲ್ಲೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ದಾವಣಗೆರೆ, ಆನಗೋಡು, ಹೆಬ್ಬಾಳು, ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ ಹಾಗೂ ಉರಕೆರೆಗೆ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ರೋಹಿತ್ ಜೈನ್ ಮನವಿಯಲ್ಲಿ ವಿವರಿಸಿದ್ದಾರೆ.- - - -1ಕೆಡಿವಿಜಿ36ಃ: ರೋಹಿತ್ ಎಸ್.ಜೈನ್