ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

| Published : Nov 02 2024, 01:38 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಜಿಪಂ ಸಿಇಒ ಎನ್‌.ಹೇಮಂತ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌.ಹೇಮಂತ್ ಅವರಿಗೆ ಮನವಿ ಸಲ್ಲಿಸಲಾಯಿತು.ಶಿವಮೊಗ್ಗ ಗ್ರಾಮಾಂತರ ಎಡೇಹಳ್ಳಿ ಸರ್ವೇ ನಂ.66ರಲ್ಲಿ 33 ಕುಟುಂಬದ ರೈತರಿಗೆ 1960-61ರಲ್ಲಿ ದರ್ಖಾಸ್ತುನಲ್ಲಿ ಜಮೀನು ಮಂಜೂರು ಮಾಡಿದ್ದು, ಇದನ್ನು ಬೆಂಗಳೂರು ಪ್ರಾದೇಶಿಕ ಕಚೇರಿ ಆಯುಕ್ತರು 2020ರಲ್ಲಿ ರದ್ದುಪಡಿಸಿದ್ದು, ತಕ್ಷಣ ಸರ್ಕಾರ ಪ್ರಾದೇಶಿಕ ಆಯುಕ್ತರ ಆದೇಶ ರದ್ದುಗೊಳಿಸಿ ಮೂಲ ಮಂಜೂರುದಾರರ ಹೆಸರಿಗೆ ಜಮೀನುಗಳ ಸಾಗುವಳಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಈ ವೇಳೆ ಸಮಿತಿಯ ಸಂಚಾಲಕ ಬಿ.ಎನ್. ರಾಜು ಮಾತನಾಡಿ, ಈ ಹಿಂದೆ ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕೂಡ ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ಇಂದು ಕಪ್ಪುಪಟ್ಟಿ ಧರಿಸಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡುವುದಾಗಿ ಈ ಹಿಂದೆ ತಿಳಿಸಿದ್ದೆ. ಆದರೆ, ಸಚಿವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಪೊಲೀಸರು ಕೂಡ ನಮ್ಮ ಸಮಿತಿಯ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ನಾವು ಶಾಂತಿಯುತವಾಗಿ ಸಿಇಒ ಮೂಲಕ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.ಸಮಾಜವಾದಿ ಮುಖಂಡ ಕಾಗೋಡು ಚಳವಳಿ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ನೀಡಿ ರಾಜ್ಯ ಸರ್ಕಾರ ಗೌರವಿಸಬೇಕು ಎಂದು ಮನವಿ ಮಾಡಿದರು. ಅಲ್ಲದೇ, ರಾಜ್ಯದ ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಸಿಸಿಟಿವಿ ಮತ್ತು ಬಯೋಮೆಟ್ರಿಕ್ ಅಳವಡಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾನವ ಹಕ್ಕು ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ರೈತರು ಇದ್ದರು.