ಕೆಎಸ್‌ಆರ್‌ಟಿಸಿ ಬಸ್ ನಗರದೊಳಗೆ ಸಂಚರಿಸಲು ಮನವಿ

| Published : Nov 15 2024, 12:37 AM IST

ಸಾರಾಂಶ

Request for KSRTC buses to ply within the city

-ಕೆಎಸ್ಆರ್ ಟಿಸಿ ಕಚೇರಿಗೆ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯಾ ಭೇಟಿ

------

ಕನ್ನಡಪ್ರಭ ವಾರ್ತೆ ಹಿರಿಯೂರು

ಬೆಂಗಳೂರಿನಿಂದ ಬರುವವರಿಗೆ ಮತ್ತು ದಾವಣಗೆರೆ ಚಿತ್ರದುರ್ಗದ ಕಡೆಯಿಂದ ಹಿರಿಯೂರಿಗೆ ಬರುವ ಪ್ರಯಾಣಿಕರನ್ನು ಕೆಎಸ್ಆರ್ ಟಿಸಿ ಯ ಕೆಲವು ಬಸ್ ಚಾಲಕರು ಹತ್ತಿಸಿಕೊಳ್ಳದೆ, ಬೈಪಾಸ್ ಮೂಲಕ ಹೋಗುತ್ತಿವೆ. ಇದನ್ನು ಪ್ರಶ್ನಿಸಿದರೆ ಸಬೂಬು ಹೇಳುತ್ತಾರೆ ಎಂದು ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಆರೋಪಿಸಿದರು.

ಕೆಎಸ್ಆರ್ ಟಿಸಿಯ ನಿಯಂತ್ರಣಾಧಿಕಾರಿಗೆ ಮನವಿ ಮಾಡಿ ಮಾತನಾಡಿದ ಅವರು ಹಿರಿಯೂರು ಪ್ರಯಾಣಿಕರನ್ನು ಬಸ್ ಚಾಲಕರು ಹತ್ತಿಸಿಕೊಳ್ಳದೆ ಇರುವುದರಿಂದ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸುವ ಕೆಲಸವಾಗಬೇಕು. ಭಾನುವಾರವು ಸೇರಿದಂತೆ ರಜಾ ದಿನಗಳ ಸಂದರ್ಭದಲ್ಲಿ ಬೆಂಗಳೂರು ಕಡೆ ಹೋಗಲು ಐದಾರು ಬಸ್ ಹತ್ತುವಷ್ಟು ಜನ ಬಸ್ ನಿಲ್ದಾಣದಲ್ಲಿ ಕಾಯುತ್ತಿರುತ್ತಾರೆ. ಆದರೆ, ಬಸ್ ಗಳು ಬೈಪಾಸ್ ಮೂಲಕವೇ ಹೋಗುತ್ತಿವೆ. ನಗರದ ಒಳಗೇ ಬರುವ ಬಸ್‌ಗಳಲ್ಲಿ ನಿಂತುಕೊಳ್ಳಲು ಸಹ ಜಾಗವಿರುವುದಿಲ್ಲ. ಹಿರಿಯೂರಿನ ವಯೋವೃದ್ಧ ಪ್ರಯಾಣಿಕರು, ಮಹಿಳೆಯರು, ವಿದ್ಯಾರ್ಥಿಗಳು ಬೆಂಗಳೂರುವರೆಗೂ ಇಲ್ಲವೇ ಚಿತ್ರದುರ್ಗದ ಕಡೆ ನಿಂತುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಹಬ್ಬಗಳ ರಜೆ ಸಂದರ್ಭದಲ್ಲಿ ಹಿರಿಯೂರಿನಿಂದ ಬೆಂಗಳೂರಿಗೆ ಹೆಚ್ಚಿನ ಬಸ್ ಬಿಡಬೇಕು. ತಕ್ಷಣ ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಕೆಎಸ್ಆರ್ ಟಿಸಿಯ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಎಸ್ಆರ್ ಟಿಸಿಯ ನಿಯಂತ್ರಣಾಧಿಕಾರಿ ನೇತ್ರಾವತಿ ಹಾಜರಿದ್ದರು.

----

ಫೋಟೊ: ನಗರದ ಕೆಎಸ್ಆರ್ ಟಿಸಿಯ ನಿಯಂತ್ರಣಾಧಿಕಾರಿ ಕಚೇರಿಗೆ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಭೇಟಿ ನೀಡಿ, ಬೈಪಾಸ್ ಮೂಲಕ ಹೋಗುವ ಬಸ್ ನಗರದೊಳಗೆ ಸಂಚರಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.