ತಾಲೂಕಿನ ಶಿಕ್ಷಕರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ,ಸಾಮಾಜಿಕ ಜಾಗೃತಿ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಾಗಾರ, ಸಭೆಗಳು ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕಾರಟಗಿ: ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಸಭೆ ಸಮಾರಂಭ ನಡೆಸಲು ಗುರುಭವನ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಿದರು.

ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶ ಮೈಲಾಪೂರ ನೇತೃತ್ವದಲ್ಲಿ ಶಿಕ್ಷಕರು ಇಲ್ಲಿನ ತಹಸೀಲ್ದಾರ್ ಕಚೇರಿಗೆ ತೆರಳಿ ಎಂ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿ ಸರ್ಕಾರದಿಂದ ಸೂಕ್ತ ನಿವೇಶನಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಮರೇಶ ಮೈಲಾಪೂರ, ತಾಲೂಕಿನ ಶಿಕ್ಷಕರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ,ಸಾಮಾಜಿಕ ಜಾಗೃತಿ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಾಗಾರ, ಸಭೆಗಳು ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಘದ ಸಭೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಇತರ ಚಟುವಟಿಕೆ ನಡೆಸಲು ಸ್ವಂತ ಕಟ್ಟಡ ಅಥವಾ ಗುರುಭವನದ ಸೌಲಭ್ಯ ಲಭ್ಯವಿಲ್ಲದ ಕಾರಣ ಹಲವು ತೊಂದರೆ ಎದುರಿಸುತ್ತಿದ್ದೇವೆ. ಶಿಕ್ಷಕರ ಹಿತದೃಷ್ಟಿಯಿಂದ ಹಾಗೂ ಭವಿಷ್ಯದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪುರಸಭೆ ವ್ಯಾಪ್ತಿಯಲ್ಲಿ ಸೂಕ್ತ ಸರ್ಕಾರಿ ಜಾಗ ಗುರುತಿಸಿ, ಶಿಕ್ಷಕರ ಸಂಘದ ಹೆಸರಿನಲ್ಲಿ ಗುರುಭವನ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡಿದಲ್ಲಿ ಶಿಕ್ಷಕರ ಸಂಘಕ್ಕೆ ಶಾಶ್ವತ ಮೂಲಸೌಕರ್ಯ ದೊರೆತು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮ ಪರಿಣಾಮಕಾರಿಯಾಗಿ ಆಯೋಜಿಸಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಮನವಿಯನ್ನು ಮಾನವೀಯ ಹಾಗೂ ಸಕಾರಾತ್ಮಕ ದೃಷ್ಟಿಯಿಂದ ಪರಿಗಣಿಸಿ ಸೂಕ್ತ ನಿವೇಶನ ಮಂಜೂರು ಮಾಡುವಂತೆ ತಮ್ಮಲ್ಲಿ ಕೋರುತ್ತೇವೆ ಎಂದರು.

ಇದಕ್ಕೂ ಮುಂಚೆ ತಹಸೀಲ್ದಾರ ಎಂ.ಕುಮಾಸ್ವಾಮಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.

ಈ ವೇಳೆ ಶಿಕ್ಷಕರ ಸಂಘದ ಉಪಾಧ್ಯಕ್ಷ ತಿಮ್ಮಣ್ಣ ನಾಯಕ, ಪ್ರಧಾನ ಕಾರ್ಯದರ್ಶಿ ಶಂಕ್ರಮ್ಮ ಸಜ್ಜನ, ಮುಖ್ಯೋಪಾದ್ಯಾಯ ಬಸ್ಸಯ್ಯ ಮಠ, ಶಾಮಸುಂದರ್ ಇಂಜನಿ, ರಾಜಶೇಖರ ಸಿರಿವಾರ ಸೇರಿದಂತೆ ಇತರರು ಇದ್ದರು.