ಸಾರಾಂಶ
ಜಾಗತಿಕ ಲಿಂಗಾಯತ ಮಹಾಸಭೆಯಲ್ಲಿ ತೀರ್ಮಾನ । ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರಕನ್ನಡಪ್ರಭ ವಾರ್ತೆಕೊಪ್ಪಳ
ಕೇಂದ್ರ ಸರ್ಕಾರ ವಾಪಸ್ಸು ಕಳುಹಿಸಿದ್ದ ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆ ಪ್ರಸ್ತಾವನೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಕೇಂದ್ರಕ್ಕೆ ಪುನಃ ಪ್ರಸ್ತಾವನೆ ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಜಾಗತಿಕ ಲಿಂಗಾಯತ ಮಹಾಸಭಾ ತೀರ್ಮಾನಿಸಿದೆ.ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಭಾನುವಾರ ನಡೆದ ಲಿಂಗಾಯತ ಮಹಾಸಭಾದ 22ನೇ ಕಾರ್ಯಕಾರಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಮೂಲಕ ಲಿಂಗಾಯತ ಸ್ವತಂತ್ರ ಧರ್ಮದ ಚರ್ಚೆ ಮತ್ತೆ ಮುನ್ನೆಲೆಗೆ ಬರಲಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಈ ವಿಷಯ ತಿಳಿಸಿದರು.ನಮ್ಮ ಪ್ರಯತ್ನ ಮತ್ತೆ ಮುಂದುವರೆಯುತ್ತದೆ. ನಮ್ಮ ಬೇಡಿಕೆ ನ್ಯಾಯಯುತವಾಗಿದೆ ಮತ್ತು ಕೇಂದ್ರ ಸರ್ಕಾರ ವಾಪಸ್ಸು ಕಳುಹಿಸುವಾಗ ನೀಡಿದ ಕಾರಣಗಳು ಸಮರ್ಪಕವಾಗಿಲ್ಲ. ಹೀಗಾಗಿ, ಆ ಮೂರು ಕಾರಣಗಳಿಗೆ ನಿಖರವಾದ ಉತ್ತರವನ್ನು ದಾಖಲೆ ಸಮೇತ ನೀಡಿ, ಪುನಃ ಅನುಮತಿ ಕೋರಿ ಪ್ರಸ್ತಾವನೆ ಕಳುಹಿಸಲಾಗುವುದು. ಅಷ್ಟಕ್ಕೂ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದು ರಾಜ್ಯಸರ್ಕಾರವೇ ಹೊರತು ಲಿಂಗಾಯತ ಮಹಾಸಭಾ ಅಲ್ಲ. ನಾಗಮೋಹನದಾಸ ಅವರ ವರದಿಯನ್ನಾಧರಿಸಿ ಪ್ರಸ್ತಾವನೆಯನ್ನು ಕಾನೂನು ಅಡಿಯಲ್ಲಿಯೇ ಕಳುಹಿಸಲಾಗಿದೆ. ಈಗ ಕೇಂದ್ರ ವಾಪಸ್ಸು ಕಳುಹಿಸುವಾಗ ನೀಡಿದ ಮೂರು ಕಾರಣಗಳಿಗೂ ಸಹ ಉತ್ತರ ನೀಡಿ, ಪುನರ್ ಪರಿಶೀಲನೆಗೆ ಕಳುಹಿಸಲು ಸಭೆ ತೀರ್ಮಾನ ಮಾಡಿದೆ ಎಂದರು.
ಒಂದನೇ ಕಾರಣ:ಲಿಂಗಾಯತ ಧರ್ಮದಲ್ಲಿ ದಲಿತರು ಇದ್ದಾರೆ. ಇದರಿಂದ ಅವರ ಎಸ್ಸಿ,ಎಸ್ಟಿ ಮಾನ್ಯತೆ ರದ್ದಾಗುತ್ತದೆ ಎಂದಿದ್ದಾರೆ. ಆದರೆ, ಈಗಾಗಲೇ ದೇಶದಲ್ಲಿ ಅನೇಕ ಧರ್ಮವನ್ನು ಸೇರಿರುವ ದಲಿತರ ಮೀಸಲಾತಿ ಸೌಲಭ್ಯಕ್ಕೆ ಸಮಸ್ಯೆ ಇಲ್ಲದಿರುವಾಗ ಲಿಂಗಾಯತ ಧರ್ಮಕ್ಕೆ ಸೇರಿದಾಗ ಯಾಕೆ ಆಗುತ್ತದೆ ಎನ್ನುವುದು ನಮ್ಮ ಉತ್ತರವಾಗಿದೆ.2ನೇ ಕಾರಣ:
1871ರಿಂದಲೂ ಜನಗಣತಿಯಲ್ಲಿ ಲಿಂಗಾಯತ ಎನ್ನುವುದು ವೀರಶೈವ ಶಾಖೆಯಾಗಿದೆ ಎಂದಿದೆ. ಇದು ಶುದ್ಧಸುಳ್ಳು. ಇದು ಅರ್ಥವಿಲ್ಲದ್ದಾಗಿದೆ.3ನೇ ಕಾರಣ
ಈಗಾಗಲೇ ಮೂರು ಬಾರಿ ಪ್ರಸ್ತಾವನೆ ಪರಿಶೀಲನೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಇದು ಹೇಗೆ ಸಾಧ್ಯ. ಈ ಹಿಂದಿನ ಮೂರು ಪ್ರಸ್ತಾವನೆಗಳು ವೀರಶೈವ ಮಹಾಸಭಾ ಕಳುಹಿಸಿರುವ ಪ್ರಸ್ತಾಪನೆಗಳು ಆಗಿವೆಯೇ ಹೊರತು. ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾವನೆಗಳು ಅಲ್ಲ. 2018ರಲ್ಲಿ ಪ್ರಥಮ ಬಾರಿಗೆ ರಾಜ್ಯ ಸರ್ಕಾರವೇ ಈ ಪ್ರಸ್ತಾವನೆ ಕಳುಹಿಸಿರುವಾಗ ಮೂರು ಬಾರಿ ಪ್ರಸ್ತಾವನೆ ಕಳುಹಿಸಲು ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ ಎಂದಿದ್ದಾರೆ.ಎಲ್ಲ ವೀರಶೈವರು ಲಿಂಗಾಯತರೇ ಆಗಿದ್ದಾರೆ. ಆದರೆ, ಎಲ್ಲ ಲಿಂಗಾಯತರು ವೀರಶೈವರು ಅಲ್ಲ ಎಂದು ನಾವು ಆಗಲೇ ಸ್ಪಷ್ಟಪಡಿಸಿದ್ದೇವೆ ಎಂದರು.
ವಚನ ಸಾಹಿತ್ಯವೇ ನಮ್ಮ ಧರ್ಮ ಗ್ರಂಥ. ಲಿಂಗಾಯತ ಧರ್ಮ ಎನ್ನುವುದು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಇದರಲ್ಲಿ ಎಲ್ಲ ಜಾತಿಯರು ಇದ್ದಾರೆ ಎಂದರು. ಹೀಗಾಗಿ, ವೀರಶೈವರು ಒಂದು ವರ್ಗವಾಗಿ ಲಿಂಗಾಯತ ಸ್ವತಂತ್ರ ಧರ್ಮದಲ್ಲಿದ್ದಾರೆ.ಈಗ ಇದನ್ನು ವೀರಶೈವ ಸಭಾವೂ ಒಪ್ಪಿದೆ ಎನ್ನುವುದು ನಮ್ಮ ಭಾವನೆ. ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಅವರು ಯಾವುದೇ ದೇವರ ಮೂರ್ತಿಯನ್ನು ಇಟ್ಟು ನಡೆಸಿಲ್ಲ. ಬದಲಾಗಿ ಬಸವಣ್ಣರ ಫೋಟೋ ಇಟ್ಟು ನಡೆಸಿದ್ದಾರೆ. ಅವರು ಸಹ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡು, ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ರಾಜಕೀಯಯಕ್ಕಾಗಿ ಯಾರಾದರೂ ಹೇಳಿಕೆ ನೀಡಿದರೇ ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾವನೆಗೆ ಸಂಪುಟದಲ್ಲಿ ಅನುಮೋದನೆ ನೀಡುವಾಗ ಇದ್ದವರೇ ನಂತರ ಅದರಿಂದಲೇ ತಪ್ಪಾಯಿತು ಎನ್ನುವ ಅರ್ಥದಲ್ಲಿ ಮಾತನಾಡಿದರೇ ಏನು ಮಾಡಲು ಆಗುವುದಿಲ್ಲ. ಅದು ಅವರ ರಾಜಕೀಯ ಹೇಳಿಕೆ ಅಷ್ಟೇ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದು ಮತ್ತು ಅಲ್ಪಸಂಖ್ಯಾತ ಮಾನ್ಯತೆಯನ್ನು ಪಡೆಯುವ ಪ್ರಯತ್ನವನ್ನು ನಾವು ಯಥಾವತ್ತಾಗಿ ಮುಂದುವರೆಸುತ್ತೇವೆ. ಇದಕ್ಕೆ ಉಳಿದವರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ಬಸವ ಸಮಿತಿ ರಾಜ್ಯಾಧ್ಯಕ್ಷ ಡಾ. ಅರವಿಂದ ಜತ್ತಿ, ವಿಶ್ರಾಂತ ನ್ಯಾಯಾಧೀಶ ನಾಗರಾಜ ಅರಳಿ, ಪ್ರಮುಖರಾದ ಸಿ.ಬಿ. ಪಾಟೀಲ್, ಕೆಂಪಗೌಡರ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ ಇದ್ದರು.