ಸಾರಾಂಶ
ಮಂಜೂರು ಮಾಡಿರುವ ಸ್ಮಶಾನ ಜಾಗವನ್ನು ಆದಿಜಾಂಬವ ಸಮುದಾಯಕ್ಕೆ ಮೀಸಲು ಜೊತೆಗ ಅನ್ಯ ಸಮುದಾಯದ ಜನರಿಗೂ ಸಹ ಸ್ಮಶಾನ ಜಾಗ ಗುರುತಿಸಬೇಕು ಎಂದು ಹನೂರು ತಾಲೂಕಿನ ಅಂಬಿಕಾಪುರ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ಮಂಜೂರು ಮಾಡಿರುವ ಸ್ಮಶಾನ ಜಾಗವನ್ನು ಆದಿಜಾಂಬವ ಸಮುದಾಯಕ್ಕೆ ಮೀಸಲು ಜೊತೆಗ ಅನ್ಯ ಸಮುದಾಯದ ಜನರಿಗೂ ಸಹ ಸ್ಮಶಾನ ಜಾಗ ಗುರುತಿಸಬೇಕು ಎಂದು ತಾಲೂಕಿನ ಅಂಬಿಕಾಪುರ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ.ಅಂಬಿಕಾಪುರದಲ್ಲಿ ಸರ್ವೇ ನಂಬರ್ 533 ರಲ್ಲಿ ೦.8೦ಸೆಂಟ್ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ಸ್ಮಶಾನ ಜಾಗಕ್ಕೆ ಅಳತೆ ಮಾಡಿ ಅಜ್ಜೀಪುರ ಗ್ರಾಪಂಗೆ ಹಸ್ತಾಂತರ ಮಾಡಿದ್ದರು. ಆದರೆ, ಈ ಜಾಗವು ಗ್ರಾಮದ ಎಲ್ಲ ಸಮುದಾಯ ಜನರಿಗೆ ಸಾಕಾಗುವುದಿಲ್ಲ. ಹೀಗಾಗಿ ಇತರೆ ಸಮುದಾಯದ ಜನರಿಗೂ ಜಾಗ ನೀಡಬೇಕು ಈಗಿರುವ ಸ್ಮಶಾನ ಜಾಗವನ್ನು ಮೀಸಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಈ ಹಿಂದೆ ಅಂಬಿಕಾಪುರ ಗ್ರಾಮದ ಆದಿ ಜಾಂಬವ ಸಮುದಾಯದ ಜನರು ಮೃತಪಟ್ಟಿದ್ದರೆ ಜೀವ ಭಯದಲ್ಲೇ ಹರಸಹಾಸದಿಂದ ಹಳ್ಳದಾಟಿ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಹೀಗಾಗಿ ಹಿಂದಿನಿಂದಲೂ ಸ್ಮಶಾನಕ್ಕೆ ಒತ್ತಾಯ ಮಾಡಲಾಗಿತ್ತು. ಇದೀಗ ಅಂಬಿಕಾಪುರದಲ್ಲಿ ಸ್ಮಶಾನಕ್ಕೆ ಜಾಗ ಕೊಟ್ಟಿದ್ದಾರೆ. ಇದೇ ಜಾಗದಲ್ಲಿ ಅನ್ಯ ಸಮುದಾಯದ ಜನರು ಸಹ ಅಂತ್ಯ ಸಂಸ್ಕಾರ ಮಾಡಲು ಬಂದಿದ್ದಾರೆ. ಹೀಗಾಗಿ ಜಾಗ ಕಡಿಮೆ ಇದೆ ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಹನೂರು ತಹಸಿಲ್ದಾರ್ ಗುರುಪ್ರಸಾದ್ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಅಂಬಿಕಾಪುರ ಸ್ಮಶಾನ ಜಾಗ ಗುರುತಿಸಿ ಗ್ರಾಪಂಗೆ ಹಸ್ತಾಂತರ ಮಾಡಲಾಗಿದೆ. ಜಾಗ ಮೀಸಲು ಅಥವಾ ವಿಸ್ತೀರ್ಣ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.